ಕುಟುಂಬ ಬಳಸಿಕೊಂಡು ತಂದೆ ಹಣಿಯಲು ಪ್ರಯತ್ನ ಹೆಚ್ಡಿಕೆ ವಿರುದ್ಧ ಯತೀಂದ್ರ ವಾಗ್ದಾಳಿ
1 min readಹೆಚ್ ಡಿ ಕುಮಾರಸ್ವಾಮಿ ಅವರು ಆರೋಪ ಮಾಡುವಾಗ ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ ಎಂದು ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಂದೆ ವಿಚಾರದಲ್ಲಿ ಕುಮಾರಸ್ವಾಮಿ ಅವರು ಏನು ಆರೋಪ ಮಾಡಲು ಆಗುತ್ತಿಲ್ಲ.
ಹೀಗಾಗಿ ಕುಟುಂಬವನ್ನು ಬಳಸಿಕೊಂಡು ತಂದೆಯನ್ನು ಹಣಿಯಲು ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಆರೋಪ ಮಾಡುವುದು ನೀಚ ರಾಜಕಾರಣ” ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಮಾಜಿ ಶಾಸಕ ಯತೀಂದ್ರ ಹೇಳಿದರು. ಮೈಸೂರಿನಲ್ಲಿ ತಮ್ಮ ಆಡಿಯೋ ವೈರಲ್ ಬಳಿಕ ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, “ಸಿಎಂ ಕುಟುಂಬವನ್ನು ಯಾವುದರಲ್ಲಾದರೂ ಸಿಲುಕಿಸುವ ಯತ್ನ ನಡೆಯುತ್ತಿದೆ” ಎಂದರು.
ವೈರಲ್ ಆಡಿಯೋ ಬಗ್ಗೆ ಯತೀಂದ್ರ ಹೇಳಿದ್ದೇನು: “ಆಡಿಯೋ ವೈರಲ್ ಬಗ್ಗೆ ನಾನು ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ನಾನು ಹತ್ತಾರು ವಿಚಾರಗಳ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ಆಗ ನಾನು ದುಡ್ಡಿನ ವಿಚಾರ ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು, ಆದರೂ ಸ್ಪಷ್ಟನೆ ನೀಡುತ್ತೇನೆ. ಅವತ್ತು ನಾನು ಮಾತನಾಡಿರುವುದು ಸಿಎಸ್ಆರ್ ಫಂಡ್ನ ವಿಚಾರದ ಬಗ್ಗೆ, ಲಿಸ್ಟ್ ಎಂದ ಕೂಡಲೇ ವರ್ಗಾವಣೆ ದಂಧೆ ಎಂದು ಹೇಳಿದರೆ ಹೇಗೆ?” ಎಂದು ವೈರಲ್ ಆಡಿಯೋದ ಬಗ್ಗೆ ಸ್ಪಷ್ಟನೆ ನೀಡಿದರು.
“ಹೆಚ್ ಡಿ ಕುಮಾರಸ್ವಾಮಿ ಅವರ ಇಡೀ ಕುಟುಂಬ ರಾಜಕಾರಣದಲ್ಲಿದೆ. ಅದರ ಬಗ್ಗೆ ನಾವು ಮಾತನಾಡಲು ಆಗುತ್ತದಯೇ. ಅವರ ಅವಧಿಯಲ್ಲಿ ಮಾಡಿರುವ ವರ್ಗಾವಣೆಗಳನ್ನ ದಂಧೆಯ ರೂಪದಲ್ಲಿ ಹಣ ಪಡೆದು ವರ್ಗಾವಣೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದರೆ ಏನು ತಪ್ಪು, ಎಲ್ಲ ವರ್ಗಾವಣೆಯನ್ನು ಹಣದ ದೃಷ್ಟಿಯಿಂದಲೇ ನೋಡಿದರೆ ಹೇಗೆ. ಆರೋಪ ಮಾಡುವಾಗ ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ. ಸುಖಾಸುಮ್ಮನೆ ಆರೋಪ ಮಾಡಬೇಡಿ. ನನ್ನ ಪಾಡಿಗೆ ನಾನು ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ಎಲ್ಲಾ ವಿಚಾರಕ್ಕೂ ನನ್ನ ಹೆಸರನ್ನು ಎಳೆದು ತರಬೇಡಿ” ಎಂದು ಹೇಳಿದರು.
ವಿವೇಕಾನಂದ ಯಾರು ಎಂದು ಗೊತ್ತಿಲ್ಲ : “ವಿವೇಕಾನಂದ ಯಾರು, ಅದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದ ಟ್ರಾನ್ಸ್ಫರ್ ಎಲ್ಲಿಗೆ ಆಗಿದೆ. ಅದು ಯಾವ ಕ್ಷೇತ್ರದ ಬಗ್ಗೆ ಎಂಬುದನ್ನು ಶಾಸಕರನ್ನ ಕೇಳಿಕೊಳ್ಳಿ. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ಅವತ್ತು ಮಾತನಾಡಿರುವುದು ಬಿಇಒ. ವಿವೇಕಾನಂದನ ಬಗ್ಗೆ, ಪೊಲೀಸ್ ವರ್ಗಾವಣೆ ಬಗ್ಗೆ ನನಗೆ ಗೊತ್ತಿಲ್ಲ” ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ದ್ವಂದ್ವ ನಿಲುವಿನಿಂದ ಹೆಚ್ಡಿಕೆ ನಾಯಕತ್ವದ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ: ಸಚಿವ ಮಹದೇವಪ್ಪ
ಸಿಎಂ ಪುತ್ರನ ಪರ ರೇವಣ್ಣ ಬ್ಯಾಟಿಂಗ್: ನಿನ್ನೆ(ಶುಕ್ರವಾರ) ಹಾಸನದಲ್ಲಿ ಶಾಸಕ ಹೆಚ್.ಡಿ ರೇವಣ್ಣ, ಯತೀಂದ್ರ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿ, “ಅಧಿಕಾರ ಇದ್ದಾಗ ಕೆಲಸ ಮಾಡಬೇಕು ಅಂತಾ ಹೇಳುತ್ತಾರೆ ಅದು ತಪ್ಪಾ?. ಯತೀಂದ್ರ ಅವರು ತಂದೆ ಕ್ಷೇತ್ರದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅದಕ್ಕೆ ಫೋನ್ ಮಾಡುತ್ತಾರೆ. ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದಾಗ ಅವರ ಕ್ಷೇತ್ರವನ್ನು ನಾನು ನೋಡಿಕೊಳ್ಳುತ್ತಿದ್ದೆ. ಹಾಗಾಗಿ ಒಂದು ಕ್ಷೇತ್ರದ ಜವಾಬ್ದಾರಿ ಇದ್ದಾಗ ಏನೋ ಮಾತನಾಡಿರುತ್ತಾರೆ. ಅದಕ್ಕೆಲ್ಲ ನಾನು ಕೆಳಮಟ್ಟಕ್ಕಿಳಿದು ಮಾತನಾಡುವುದಿಲ್ಲ” ಎಂದಿದ್ದರು.