ಡಿಕೆಶಿ ವಿರುದ್ಧದ ಸಿಬಿಐ ತನಿಖೆಯ ಅನುಮತಿ ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ: ಯಡಿಯೂರಪ್ಪ
1 min readಡಿಸಿಎಂ ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧದ ತನಿಖೆಯನ್ನು ಸಿಬಿಐನಿಂದ ಸರ್ಕಾರ ಹಿಂಪಡೆಯುವುದನ್ನು ಮಾಜಿ ಸಿಎಂ ಯಡಿಯೂರಪ್ಪ ವಿರೋಧಿಸಿದ್ದು, ತಾವು ಅಧಿಕಾರದಲ್ಲಿದ್ದಾಗ ತೆಗೆದುಕೊಂಡಿದ್ದ ನಿರ್ಧಾರದ ಬಗ್ಗೆ ಸಮರ್ಥನೆ ನೀಡಿದ್ದಾರೆ.
ಬೆಂಗಳೂರು: ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ. ಶಿವಕುಮಾರ್ ಅವರನ್ನು ರಕ್ಷಿಸಲು ರಾಜ್ಯ ಸರ್ಕಾರ ಕಾನೂನು ಬಾಹಿರ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಗ್ಗೆ ದಾಖಲೆ ಸಮೇತ ಬೆಳಗಾವಿ ಅಧಿವೇಶನದಲ್ಲಿ ಪಕ್ಷದ ಶಾಸಕರು ಮಾತನಾಡುತ್ತಾರೆ ಎಂದು ಹೇಳಿದರು. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್ ಒಪ್ಪಿಗೆಯ ಮೇರೆಗೆ ಸಿಬಿಐ ತನಿಖೆಗೆ ವಹಿಸಲಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪದಲ್ಲಿ ಹುರುಳಿಲ್ಲ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.
ಅಡೋಕೇಟ್ ಜನರಲ್ ಒಪ್ಪಿಗೆ ಇಲ್ಲದೆ ಕಾನೂನು ಬಾಹಿರವಾಗಿ ಸಿಬಿಐ ತನಿಖೆಗೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಆದರೆ, ವಾಸ್ತವವಾಗಿ ಜಾರಿ ನಿರ್ದೇಶನಾಲಯದ ಬರೆದ ಪತ್ರದ ಆಧಾರದ ಮೇಲೆ ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದು ಸಿಬಿಐಗೆ ನೀಡಲಾಗಿತ್ತು. ಇಡಿ ಪತ್ರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇಡಿ ಸಂಸ್ಥೆಯು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಡಿ.ಕೆ.ಶಿವಕುಮಾರ್ ಆಸ್ತಿ ಸಂಪಾದನೆಯಲ್ಲಿ ಅಕ್ರಮ ಎಸಗಿದ್ದು, ನಿಬಂಧನೆಗಳನ್ನು ಉಲ್ಲಂಘನೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿತ್ತು. ಇದರ ಬಗ್ಗೆ ಅಡೋಕ್ವೇಟ್ ಜನರಲ್ ಬಳಿಕ ಚರ್ಚಿಸಿ ಅಭಿಪ್ರಾಯವನ್ನು ಪಡೆದುಕೊಳ್ಳಲಾಗಿತ್ತು. ಅವರ ಅಭಿಪ್ರಾಯದ ಮೇರೆಗೆ ಸಿಬಿಐಗೆ ನೀಡಬಹುದು ಎಂದು ಹೇಳಿದ್ದರಿಂದ ಪ್ರಕರಣವನ್ನು ಸಿಬಿಐ ನೀಡುವಂತೆ ಕ್ರಮ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಪ್ರಕರಣದ ತನಿಖೆ ಇದೀಗ ಪ್ರಗತಿಯಲ್ಲಿದೆ. ಸರ್ಕಾರದ ನಡೆಯನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ವೇಳೆ ಅಡ್ವೋಕೇಟ್ ಜನರಲ್ ಸಮರ್ಥಿಸಿಕೊಂಡಿದ್ದರು. ಹೀಗಾಗಿ ಹೈಕೋರ್ಟ್ ಶಿವಕುಮಾರ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು ಎಂದು ಹೇಳಿದರು. ಸರ್ಕಾರದ ನಿಲುವು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಮಾನಕ್ಕೆ ಅವಕಾಶ ಮಾಡಿಕೊಡಬೇಕಿತ್ತು. ಪ್ರಕರಣದ ತನಿಖೆಯನ್ನು ವಾಪಸ್ ಪಡೆದಿರುವ ಸರ್ಕಾರದ ಕ್ರಮವನ್ನು ಜನತೆ ಒಪ್ಪುವುದಿಲ್ಲ. ರಾಜ್ಯದ ಜನತೆಯ ಕ್ಷಮೆಯನ್ನು ಮುಖ್ಯಮಂತ್ರಿಗಳು ಕೇಳಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ತಮ್ಮ ಸಚಿವ ಸಂಪುಟ ಸದಸ್ಯರ ಜತೆ ಗುಟ್ಟಾಗಿ ಸಭೆ ನಡೆಸಿ ಪ್ರಕರಣವನ್ನು ವಾಪಸ್ ಪಡೆದುಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ. ಈ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.