ದೇಶಾದ್ಯಂತ ಇಂದು, ನಾಳೆ ಮತದಾರರ ಪಟ್ಟಿ ಪರಿಷ್ಕರಣೆ
1 min readಕೇಂದ್ರ ಚುನಾವಣಾ ಆಯೋಗ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024 ಅನ್ನು ದೇಶಾದ್ಯಂತ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ನವೆಂಬರ್ 18, 19ರಂದು ವಿಶೇಷ ನೋಂದಣಿ ಅಭಿಯಾನ ಕೈಗೊಳ್ಳಲಾಗಿದೆ. ಇಂದು ಮತ್ತು ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಯಲ್ಲಿ ಇರಲಿದ್ದು, ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.
ಮತದಾರರು ತಮ್ಮ ಮತಗಟ್ಟೆಗೆ ಭೇಟಿ ನೀಡಿ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಬದಲಾವಣೆಗಳಿದ್ದಲ್ಲಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಬದಲಾವಣೆ ಮಾಡಬಯಸುವವರು ವೋಟರ್ ಹೆಲ್ಪ್ಲೈನ್ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಸಂಬಂಧಿಸಿದ ಮತಗಟ್ಟೆ ಅಧಿಕಾರಿ ಅಥವಾ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿಯೂ ಅರ್ಜಿ ಸಲ್ಲಿಸಬಹುದು. ಆಯೋಗದ ಸಹಾಯವನ್ನು 1951 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಮುಂದಿನ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಡಿಸೆಂಬರ್ 2 ಮತ್ತು 3ರಂದು ನಡೆಯಲಿದೆ.
ಮತಗಟ್ಟೆ, ಮತದಾರರ ನೋಂದಣಾಧಿಕಾರಿ ಕಚೇರಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ, ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾಗಿದೆ. ಯುವ ಮತದಾರರ ನೋಂದಣಿಗೆ ನಮೂನೆ 6, ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ 7, ಆಧಾರ್ ಸಂಖ್ಯೆ ಜೋಡಣೆಗೊಳಿಸಲು ನಮೂನೆ 6ಬಿ, ವಿಳಾಸ ಬದಲಾವಣೆ, ಬದಲಿ ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿಯಲ್ಲಿ ತಪ್ಪುಗಳಿದ್ದಲ್ಲಿ ತಿದ್ದುಪಡಿಗೆ, ಅಂಗವಿಕಲ ಮತದಾರರನ್ನುಗುರುತಿಸಲು ನಮೋನೆ 8ರಲ್ಲಿ ಸಲ್ಲಿಸಬಹುದು. 18 ವರ್ಷ ಪೂರ್ಣಗೊಂಡ ಅಥವಾ ಪೂರ್ಣಗೊಳ್ಳುತ್ತಿರುವ ಮತದಾರರು ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ವರ್ಷಕ್ಕೆ 4 ಬಾರಿ ಅವಕಾಶ ನೀಡಲಾಗುತ್ತದೆ.