ವಿರಾಟ್‌ಗೆ ಗೋಲ್ಡನ್ ಬ್ಯಾಟ್ ಉಡುಗೊರೆ ನೀಡಿದ ಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿ
1 min readಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿಯ(ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಅವರು, ಭಾನುವಾರ 35ನೇ ಹುಟ್ಟುಹಬ್ಬ ಆಚರಿಸಿಕೊಂಡ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಚಿನ್ನದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು.
ಬ್ಯಾಟ್ ಮೇಲೆ ‘ಹ್ಯಾಪಿ ಬರ್ತ್‌ಡೇ ವಿರಾಟ್’ ಎಂದು ಬರೆಯಲಾಗಿದ್ದು, ಅದರ ಕೆಳಗೆ ‘ನೀವು ಸಮರ್ಪಣೆಯ ಸಂಕೇತ ಮತ್ತು ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದಕ್ಕೆ ಜೀವಂತ ಸಾಕ್ಷಿ’ಎಂದು ಕೆತ್ತಲಾಗಿದೆ. ಬಳಿಕ, ತಮ್ಮ ಪ್ರತಿಮೆಯಂತಿದ್ದ ದೈತ್ಯ ಕೇಕ್ ಅನ್ನು ವಿರಾಟ್ ಕತ್ತರಿಸಿದರು. ವಿಶೇಷ ನೀಲಿ ಐಸಿಂಗ್ ಹೊಂದಿದ್ದ ಡಾರ್ಕ್ ಚಾಕೊಲೇಟ್ ಕೇಕ್ ಇದಾಗಿತ್ತು.
ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ 49 ಶತಕ ಸಿಡಿಸಿದ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ರನ್ ಗಳಿಕೆ ಕಷ್ಟಕರವಾಗಿದ್ದ ಪಿಚ್‌ನಲ್ಲಿ 121 ಎಸೆತಗಳನ್ನು ಎದುರಿಸಿದ ಕೊಹ್ಲಿ 10 ಬೌಂಡರಿ ಸಹಿತ ಅಜೇಯ 101 ರನ್ ಸಿಡಿಸಿದರು. ಇನ್ನೊಂದು ಶತಕ ಸಿಡಿಸಿದರೆ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ದಾಖಲಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರವಾಗಲಿದ್ದಾರೆ.
ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಅವರ 79ನೇ ಶತಕವೂ ಹೌದು. ವಿರಾಟ್ ಏಕದಿನದಲ್ಲಿ 49, ಟೆಸ್ಟ್‌ನಲ್ಲಿ 29 ಮತ್ತು ಟಿ20ಯಲ್ಲಿ ಒಂದು ಶತಕ ಸಿಡಿಸಿದ್ದಾರೆ.
ವಿರಾಟ್ ಅವರು 2009ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಅಂತರರಾಷ್ಟ್ರೀಯ ಶತಕವನ್ನು ಗಳಿಸಿದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ದಾಖಲೆಯ ಶತಕವನ್ನು ಗಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟರ್ ವಿರಾಟ್ ಆಗಿದ್ದಾರೆ.