ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸಿದ ಗ್ರಾಮಸ್ಥರು
1 min read
ದೇವರೆಡ್ಡಿಪಲ್ಲಿಯಲ್ಲಿ ಕ್ರೀಡಾ ಸಂಭ್ರಮ
ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸಿದ ಗ್ರಾಮಸ್ಥರು
ಗ್ರಾಮಸ್ಥರನ್ನು ಒಂದು ಮಾಡಿದ ಕ್ರೀಡಾಕೂಟ
ಗ್ರಾಮೀಣ ಪ್ರದೇಶದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದ ಗ್ರಾಮೀಣ ಕ್ರೀಡೆ ಹಾಗು ಕಲೆಗಳು ಆಧುನಿಕತೆಯ ಭರಾಟೆಗೆ ಸೊರಗುತ್ತಿದ್ದು, ಯುವಕರ ನಿರುತ್ಸಾಹ ಹಾಗು ರಾಜಕೀಯ ಗುಂಪುಗಾರಿಕೆ ಗ್ರಾಮೀಣ ಸಂಸ್ಕೃತಿಯನ್ನು ಮಂಕಾಗಿಸುತ್ತಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.
ಬಾಗೇಪಲ್ಲಿ ತಾಲ್ಲೂಕಿನ ದೇವರೆಡ್ಡಿಪಲ್ಲಿಯಲ್ಲಿ ಯುವ ಸಬಲೀಕರಣ ಇಲಾಖೆ, ಮಲ್ಲಸಂದ್ರ ವಾಲ್ಮೀಕಿ ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಘ ಹಾಗು ದೇವರೆಡ್ಡಿನಲ್ಲಿ ಜನತಾ ಕ್ರೀಡಾ ಯುವಕರ ಸಂಘಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ, ಕೆಲ ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಪ್ರಸಿದ್ದಿಯಾಗಿದ್ದ ಗ್ರಾಮೀಣ ಕ್ರೀಡೆಗಳು, ನಾಟಕಗಳು ಗ್ರಾಮಗಳಲ್ಲಿ ಸಂಭ್ರಮದ ಸನ್ನಿವೇಶ ಸೃಷ್ಟಿಸುತ್ತಿತ್ತು. ಗ್ರಾಮಸ್ಥರೆಲ್ಲಾ ಒಂದೇ ಕಡೆ ಸೇರಿ ಸಂಭ್ರಮಪಡುತ್ತಿದ್ದರು. ದಿನವಿಡೀ ದುಡಿಮೆಯ ದಣಿವನ್ನು ನಿವಾರಿಸಿಕೊಳ್ಳುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಆಧುನಿಕತೆ ಇವೆಲ್ಲವನ್ನು ಮರೆಯಾಗುವಂತೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುವ ಜನತೆ ಬೇರೊಂದು ದಿಕ್ಕಿನಲ್ಲಿ ಸಾಗುತ್ತಿದ್ದು ಗ್ರಾಮೀಣ ಸಂಸ್ಕೃತಿ, ಕಲೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಇಂದು ನಡೆದ ಗ್ರಾಮೀಣ ಕ್ರೀಡಾ ಕೂಟದಲ್ಲಿ ಗ್ರಾಮಸ್ಥರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದ್ದು ದೇವರೆಡ್ಡಿನಲಿಯಲ್ಲಿ ಹಬ್ಬದ ವಾತಾವರಣ ನಿರ್ಮಿಸಿದೆ. ಗ್ರಾಮದ ಗತ ವೈಭವ ಮರುಕಳಿಸಿದಂತಾಗಿದೆ ಎಂದು ತಿಳಿಸಿದರು. ದೇವರೆಡ್ಡಿಪಲ್ಲಿಯಲ್ಲಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾಕೂಟ ಗ್ರಾಮದಲ್ಲಿ ಸಡಗರದ ವಾತಾವರಣ ನಿರ್ಮಿಸಿತ್ತು.
ರಂಗೋಲಿ ಸ್ಪರ್ಧೆ, ಗೋಣಿ ಚೀಲದ ಓಟ, ಹಗ್ಗ ಜಗ್ಗಾಟ, ಲೆಮನ್ ಆನ್ ದಿಸ್ ಸ್ಫೂನ್, ಮಡಿಕೆ ಹೊಡೆಯುವುದು, ಮ್ಯೂಸಿಕಲ್ ಚೇರ್, ಮೂರು ಕಾಲಿನ ಓಟ ಮತ್ತಿತರ ಸ್ಪರ್ಧೆಗಳಲ್ಲಿ ಭಾಗವಹಿಸಲು ತೀವ್ರ ಪೈಪೋಟಿ ಉಂಟಾಗಿತ್ತು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ವಯಸ್ಸಿನ ಭೇದ-ಭಾವವಿಲ್ಲದೆ ಕ್ರೀಡೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಡಿ.ಎನ್.ಸುಧಾಕರರೆಡ್ಡಿ, ನಾಗಮಣಿ ಶಿವಪ್ಪ, ಶಿಕ್ಷಕ ಲಕ್ಷ್ಮಿ ನರಸಿಂಹಪ್ಪ, ಡ್ರೆವಿಂಗ್ ಸ್ಕೂಲ್ ಪ್ರಾಂಶುಪಾಲ ಡಿ.ಎನ್.ನಾಗರಾಜ, ಸತೀಶ್, ನರಸಿಂಹರೆಡ್ಡಿ, ಡಿ.ಎನ್.ನರಸರಾಮರೆಡ್ಡಿ, ಡಿ.ಪಿ.ಲಕ್ಷ್ಮಿ ಪತಿ, ಮಂಜುನಾಥ, ಚೌಡರೆಡ್ಡಿ, ಜಿ. ಆನಂದ, ಮುನಿರಾಜು, ನವನೀತ್, ಜಿ.ಶಂಕರಪ್ಪ, ನಂದೀತ, ರಘು ಕೃಷ್ಣಾರೆಡ್ಡಿ ಇದ್ದರು.