ವಿಜಾಪುರದಿಂದ ವಿಜಯಪುರ ಆಯ್ತು; ಈಗ ಮತ್ತೆ ಜಿಲ್ಲೆಯ ಹೆಸರು ಬದಲಿಸಲು ಚಿಂತನೆ!
1 min readಗುಮ್ಮಟ ನಗರಿಗೆ ನೂರಾರು ವರ್ಷಗಳಿಂದ ಇದ್ದ ಬಿಜಾಪುರ, ವಿಜಾಪುರ ಎಂಬ ಹೆಸರನ್ನು ಕೆಲ ವರ್ಷಗಳ ಹಿಂದೆ ವಿಜಯಪುರ ಎಂದು ಬದಲು ಮಾಡಲಾಗಿತ್ತು. ಸದ್ಯ ಮತ್ತೆ ಹೆಸರು ಬದಲಾವಣೆ ಮಾಡುವ ಕೂಗು ಜೋರಾಗಿದೆ. ಬಸವಣ್ಣನ ಹೆಸರಿಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
12ನೇ ಶತಮಾನದಲ್ಲಿಅಂತರ್ಜಾತಿ ವಿವಾಹ ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ವಿಶ್ವವಂದ್ಯ ಬಸವಣ್ಣನವರಿಗೆ ಜನ್ಮ ನೀಡಿದ ಪಾವನ ಭೂಮಿ ವಿಜಯಪುರ ಜಿಲ್ಲೆಗೆ ಅಣ್ಣನ ಹೆಸರಿಡಬೇಕೆಂಬ ಕೂಗು ದಟ್ಟವಾಗಿದ್ದು, ಇಲ್ಲಿನ ಗೋಲಗುಮ್ಮಟದಲ್ಲಿ ನಿತ್ಯ ನಿನಾದಿಸುತ್ತಿದೆ.
ವಿಜಯಪುರಕ್ಕೆ ವಿಶ್ವಗುರು ಬಸವಣ್ಣನವರ ಹೆಸರಿಡಬೇಕೆಂದು ನಗರದ ಸಮಾಜ ಸೇವಕ ಬಾಬಾಸಾಹೇಬ ವಿಜಯದಾರ ಸೇರಿದಂತೆ ಜಿಲ್ಲೆಯ ನಾನಾ ಸಂಘ-ಸಂಸ್ಥೆಗಳು ಆಗಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬರೆದ ಪತ್ರವನ್ನು ರಾಜ್ಯ ಸರಕಾರ ಸ್ವೀಕೃತ ಮಾಡಿದ್ದೇ ತಡ, ಜಿಲ್ಲಾಡಳಿತ ಜಿಲ್ಲೆಗೆ ಬಸವಣ್ಣವರ ಹೆಸರು ಮರುನಾಮಕರಣ ಮಾಡುವ ಕುರಿತು ಸಾರ್ವಜನಿಕರಿಂದ ಲಿಖಿತ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.
2014 ರಲ್ಲಿ ವಿಜಯಪುರವೆಂದು ನಾಮಕರಣ
ಜಿಲ್ಲಾಡಳಿತದ ಈ ಪ್ರಸ್ತಾವನೆಗೆ ಜಿಲ್ಲೆಯ ಸಾರ್ವಜನಿಕರಿಂದ ಪರ ಹಾಗೂ ವಿರೋಧ ಅಭಿಪ್ರಾಯಗಳು ಕೇಳಿಬಂದಿವೆ. ತೀರಾ ಇತ್ತೀಚೆಗಷ್ಟೇ 2014ರಲ್ಲಿ ವಿಜಾಪುರ ಹೆಸರನ್ನು ವಿಜಯಪುರ ಎಂದು ಮರುನಾಮಕರಣ ಮಾಡಿದೆ. ಜಿಲ್ಲೆಯ ಹೆಸರನ್ನು ಮತ್ತೇಕೆ ಮರುನಾಮಕರಣ ಮಾಡಬೇಕು. ಈ ರೀತಿ ಮಾಡುವುದರಿಂದ ಜಿಲ್ಲೆಗೆ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.