ಮೊದಲ ಬಾರಿಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದ ವಿಜಯಲಕ್ಷ್ಮೀ.. ಆದರೆ, ದರ್ಶನ್ ಭೇಟಿಗೆ ಅಲ್ಲ!
1 min readಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ತೂಗುದೀಪ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರ ಜೊತೆಗೆ ಇತರ ಆರೋಪಿಗಳು ಇದ್ದಾರೆ. ಇದೇ ವೇಳೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಗಂಭೀರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಆಪ್ತೆ ಪವಿತ್ರಾ ಗೌಡ ಸೇರಿ ಒಟ್ಟು 19 ಮಂದಿ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾರೆ. ಇದೇ ವೇಳೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೂ ಪೊಲೀಸರು ನೊಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಹೀಗಾಗಿ ವಿಜಯಲಕ್ಷ್ಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಪೊಲೀಸ್ ಠಾಣೆಯಲ್ಲಿ 9 ದಿನಗಳನ್ನು ಕಳೆದಿದ್ದಾರೆ. ಪ್ರಕರಣದಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ಕೂಡ ಈಗ ವಿಚಾರಣೆ ನಡೆಸಲಾಗುತ್ತಿದೆ. ಇದಕ್ಕೆ ಕಾರಣ ವಿಜಯಲಕ್ಷ್ಮೀ ಮನೆಯಲ್ಲಿ ದರ್ಶನ್ ಅವರ ಶೂ ಸಿಕ್ಕಿರುವುದು. ಇದರ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ನಿರ್ಧರಿಸಿದ್ದು, ಅವರಿಗೂ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿರುವ ವಿಜಯಲಕ್ಷ್ಮೀ ತಮ್ಮ ಮನೆಯಲ್ಲಿ ಕೊಲೆ ಆರೋಪಿ ದರ್ಶನ್ ಅವರ ಶೂ ಸಿಕ್ಕಿದ್ದರ ಬಗ್ಗೆ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಮಾಡಿದ ನಂತರ ನಟ ದರ್ಶನ್ ಧರಿಸಿದ್ದ ಶೂಗಳು ವಿಜಯಲಕ್ಷ್ಮೀ ಅವರ ಮನೆಯಲ್ಲಿ ಸಿಕ್ಕಿದ್ದವು. ಶೂಗಳನ್ನು ಪೊಲೀಸರು ಸ್ಥಳ ಮಹಜರು ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು, ಪ್ರಕರಣ ದಾಖಲಾಗಿ ನಟ ದರ್ಶನ್ ಜೈಕು ಸೇರಿ ಬರೋಬ್ಬರಿ ಒಂಬತ್ತು ದಿನಗಳಾದರೂ ಕೂಡ, ಅವರ ಪತ್ನಿ ವಿಜಯಲಕ್ಷ್ಮೀ, ತಾಯಿ ಮೀನಾ ತೂಗುದೀಪ್, ತಮ್ಮ ದಿನಕರ್ ತೂಗುದೀಪ್, ಸ್ನೇಹಿತರು ಅಥವಾ ಕುಟುಂಬಸ್ಥರು ಪೊಲೀಸ್ ಠಾಣೆಯತ್ತ ತಲೆ ಹಾಕಿಲ್ಲ. ಆದರೆ, ಈಗ ವಿಜಯಲಕ್ಷ್ಮೀ ಪೊಲೀಸ್ ಠಾಣೆಗೆ ಬಂದಿದ್ದಾರೆ. ಅದು ಕೂಡ ದರ್ಶನ್ ಅವರನ್ನು ಭೇಟಿ ಮಾಡಲು ಅಲ್ಲ. ಬದಲಿಗೆ ಪ್ರಕರಣದ ಬಗ್ಗೆ ತಮ್ಮ ಹೇಳಿಕೆ ದಾಖಲಿಸಲು.
ಜೂನ್ 11 ರಂದು ನಟ ದರ್ಶನ್ ಬಂಧನದ ನಂತರ, ವಿಜಯಲಕ್ಷ್ಮಿ ವಿರುದ್ಧವು ಹಲವು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಅನುಭವಿಸಿದ್ದರು. ಬಳಿಕ ಆಕೆ ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್ ನಿಷ್ಕ್ರಿಯಗೊಳಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ಮತ್ತೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸಕ್ರಿಯಗೊಳಿಸಿದರು. ದರ್ಶನ್ ಬೆಂಬಲಕ್ಕೆ ನಿಲ್ಲುತ್ತಿಲ್ಲ ಎಂಬ ಆರೋಪಗಳ ಬೆನ್ನಲ್ಲೆ,ಕ್ರಿಮಿನಲ್ ವಕೀಲ ರವಿ ಬಿ ನಾಯಕ್ ಮತ್ತು ಹೈಕೋರ್ಟ್ ಹಿರಿಯ ವಕೀಲ ನಾಗೇಶ್ ಅವರನ್ನು ಭೇಟಿಯಾಗಿದ್ದರು.
ತನ್ನ ಪತಿಗೆ ಪವಿತ್ರಾ ಗೌಡ ಅವರೊಂದಿಗೆ ಸಂಬಂಧವಿದೆ ಎಂದು ಗೊತ್ತಿದ್ದರೂ, ಇಬ್ಬರ ನಡುವೆ ವೈಯಕ್ತಿಕ ಅಸಮಾಧಾನದ ಹೊರತಾಗಿಯೂ ದರ್ಶನ್ ಅವರನ್ನು ಜೈಲಿನಿಂದ ಹೊರ ತರುವ ವಿಜಯಲಕ್ಷ್ಮಿ ಅವರ ನಿರ್ಧಾರವನ್ನು ದರ್ಶನ್ ಅಭಿಮಾನಿಗಳು ಮೆಚ್ಚಿದ್ದಾರೆ. ಆದರೆ, ವಿಜಯಲಕ್ಷ್ಮಿ ಅವರು ಬೇರೆ ಯಾವುದೇ ಆರೋಪಿಗಳ ಪರ ವಾದ ಮಾಡಲು ವಕೀಲರನ್ನು ಕೇಳಿಕೊಂಡಿಲ್ಲ. ದರ್ಶನ್ ಪರವಾಗಿ ಮಾತ್ರ ವಾದ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.