ನಾಡಿನಾದ್ಯಂತ ವರ ಮಹಾಲಕ್ಷ್ಮಿಹಬ್ಬದ ಆಚರಣೆ
1 min readನಾಡಿನಾದ್ಯಂತ ವರ ಮಹಾಲಕ್ಷ್ಮಿಹಬ್ಬದ ಆಚರಣೆ
ಬೆಲೆ ಏರಿಕೆ ನಡುವೆಯೂ ಕುಗ್ಗದ ಹಬ್ಬದ ಉತ್ಸಾಹ
ಬೆಳಗಿನಿಂದಲೇ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ
ಮುತ್ತೈದೆಯರನ್ನು ಆಹ್ವಾನಿಸಿ ಬಾಗೀನ ನೀಡಿ ಆಶೀರ್ವಾದ ಪಡೆದ ಮಹಿಳೆಯರು
ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಮಳೆ ಇಲ್ಲದೆ, ಬೆಳೆ ಕೈಗೆ ಸಿಗದೆ ಮೂರು ವರ್ಷಗಳಾಗಿದೆ. ಆದರೂ ಅದೃಷ್ಟ ಲಕ್ಷ್ಮಿಯನ್ನು ಓಲೈಸಿಕೊಳ್ಳಲು ನಾಡಿನಾದ್ಯಂತ ಜನ ಇಂದು ವರ ಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ಇಂದು ಶ್ರಾವಣ ಮಾಸದ ಎರಡನೇ ಶನಿವಾರ. ವರ ಮಹಾಲಕ್ಷ್ಮಿ ವ್ರತ ಆಚರಣೆ ಮಾಡುವ ದಿನ ಇಂದು ಲಕ್ಷ್ಮಿಆರಾಧನೆ ಮಾಡಿದರೆ ಅಷ್ಟ ಲಕ್ಷ್ಮಿಯರು ಸಂತೃಪ್ತರಾಗುತ್ತಾರೆ ಅನ್ನೋದು ನಂಬಿಕೆ. ಹಾಗಾಗಿಯೇ ಜಿಲ್ಲೆಯಾದ್ಯಂತ ಇಂದು ವರ ಮಹಾಲಕ್ಷ್ಮಿಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಹಾಗಾದರೆ ಈ ಹಬ್ಬ ಆಚರಣೆಗೆ ಕಾರಣವೇನು, ಆಚರಣೆಯಿಂದ ಸಿಗುವ ಉಪಯೋಗವೇನು ಎಂಬುದನ್ನು ನೋಡೋಣ ಬನ್ನಿ.
ಮುನಿಗಳಲ್ಲಿ ಅತ್ಯಂತ ಕೋಪಿಷ್ಟರೆಂದೇ ಖ್ಯಾತರಾದ ದುರ್ವಾಸ ಮಹರ್ಷಿಗಳ ಶಾಪದಿಂದಾಗಿ ದೇವೇಂದ್ರ ರಾಜ್ಯಭ್ರಷ್ಟನಾಗುತ್ತಾನೆ. ಆಗ ಸ್ವರ್ಗಲಕ್ಷ್ಮಿಯೂ ಸ್ವರ್ಗವನ್ನು ಬಿಟ್ಟು ವೈಕುಂಠ ಸೇರಿಕೊಳ್ಳುತ್ತಾಳೆ. ಇದರಿಂದ ದೇವಲೋಕಕ್ಕೆ ದಾರಿದ್ರ ಕಾಡತೊಡಗುತ್ತದೆ. ಇದರಿಂದ. ದುಃಖಪ್ತರಾದ ದೇವತೆಗಳೆಲ್ಲರೂ ಚತುರ್ಮುಖ ಬ್ರಹ್ಮನನ್ನು ಮುಂದಿಟ್ಟುಕೊ0ಡು, ವೈಕುಂಠವಾಸಿ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ.
ಭಗವಾನ್ ವಿಷ್ಣುವಿನ ಆಜ್ಞೆಯಂತೆ ಅಮೃತ ಪಡೆಯಲು ಸಮುದ್ರ ಮಂಥನ ಮಾಡಲು ರಾಕ್ಷಸರು ಹಾಗೂ ದೇವತೆಗಳು ಮಂದಾರ ಪರ್ವತವನ್ನು ಕಡೆಗೋಲಾಗಿ ಮಾಡಿಕೊಂಡು ವಾಸುಕಿಯ ಸಹಾಯದೊಂದಿಗೆ ಸಮುದ್ರವನ್ನು ಕರೆಯುತ್ತಾರೆ. ಆಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಮಹೇಂದ್ರನ ಸಂಪತ್ ಸ್ವರೂಪಿಣಿಯಾದ ಮಹಾಲಕ್ಷ್ಮಿಯ ಜನನವಾಗಿ, ದೇವತೆಗಳನ್ನು ಅನುಗ್ರಹಿಸಿದ್ದಲ್ಲದೇ, ಮಹಾವಿಷ್ಣುವನ್ಬು ಧರಿಸುತ್ತಾಳೆ.
ಸಮುದ್ರ ಮಂಥನದಲ್ಲಿ ಹುಟ್ಟಿದ ವರಮಹಾಲಕ್ಷ್ಮಿಯನ್ನು ಕ್ಷೀರಸಮುದ್ರಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನ ತಂಗಿ, ಕಮಲದಲ್ಲಿ ಆವಿರ್ಭವಿಸಿದವಳು ಎಂದೂ ಕರೆಯಲಾಗುತ್ತದೆ. ಹಾಗಾಗಿ ಆ ದಿನವನ್ನು ವರ ಮಹಾಲಕ್ಷ್ಮಿ ವ್ರತ ಆಚರಿಸಲಾಗುತ್ತದೆ.
ಮತ್ತೊಂದು ಪುರಾಣ ಕತೆಯ ಪ್ರಕಾರ ಒಮ್ಮೆ ಶಿವ ಪಾರ್ವತಿಯರು ಏಕಾಂತದಲ್ಲಿ ಮಾತನಾಡುತ್ತಿದ್ದಾಗ ಈ ಜಗತ್ತಿನ ಉದ್ಧಾರಕ್ಕಾಗಿ ಯಾವ ವ್ರತ ಮಾಡಿದರೆ ಶ್ರೇಷ್ಠ ಎಂದು ಜಗಜ್ಜನನಿಯಾದ ಪಾರ್ವತಿ ಕೇಳುತ್ತಾರೆ. ಆಗ ತಡಮಾಡದೇ ಸ್ವತಃ ಈಶ್ವರನು ವರಮಹಾಲಕ್ಷ್ಮಿವ್ರತವೇ ಅತ್ಯಂತ ಶ್ರೇಷ್ಠವಾದ ವ್ರತ ಎಂದು ತಿಳಿಸಿ. ಆ ವ್ರತದ ಮಹಾತ್ಮೆಯನ್ನು ಪಾರ್ವರ್ತಿಗೆ ಕಥೆಯ ರೂಪದಲ್ಲಿ ಹೇಳುತ್ತಾನೆ. ಕುಂಡಿನ ಎಂಬ ಊರಿನಲ್ಲಿ ಚಾರುಮತಿ ಎಂಬ ಬಡ ಮಹಿಳೆ ಇದ್ದಳು. ಬಡತನದಲ್ಲಿ ಆಕೆ ಖಾಯಿಲೆ ಪೀಡಿತ ತನ್ನ ವಯೋವೃಧ್ಧ ಅತ್ತೆ ಮಾವಂದಿರ ಸೇವೆಯನ್ನು ನಿಶ್ಕಲ್ಮಶವಾಗಿ ಅತ್ಯಂತ ಶ್ರಧ್ಧೆಯಿಂದ ಮಾಡುತ್ತಿದ್ದರೂ ಅವರ ಖಾಯಿಲೆಗಳು ವಾಸಿಯಾಗದೇ ಅವರು ನರಳುತ್ತಿದ್ದನ್ನು ನೋಡಿ, ಓ ದೇವರೇ, ದಯವಿಟ್ಟು ನಮ್ಮ ಅತ್ತೆ ಮಾವನವರ ಖಾಯಿಲೆಯನ್ನು ಗುಣಪಡಿಸು. ಅವರ ನರಳುವಿಕೆಯನ್ನು ನಾನು ನೋಡಲಾರೆ ಎಂದು ಪ್ರತೀ ದಿನವೂ ಕೇಳಿಕೊಳ್ಳುತ್ತಿದ್ದಳು.
ಅದೊಂದು ದಿನ ಇದ್ದಕ್ಕಿದ್ದಂತೆಯೇ ಆಕೆಯ ಸ್ವಪ್ನದಲ್ಲಿ ಮಹಾಲಕ್ಷ್ಮಿ ಕಾಣಿಸಿಕೊಂಡು, ಎಲೈ ಚಾರುಮತಿಯೇ ನೀನು ಅತ್ತೆ- ಮಾವಂದಿರನ್ನು ಕಾಳಜಿಯಿಂದ ಸೇವೆ ಮತ್ತು ಶುಶ್ರೂಷೆ ಮಾಡುವುದನ್ನು ಕಂಡು ಮೆಚ್ಚಿದ್ದೇನೆ. ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರ ನನ್ನನ್ನು ಪೂಜಿಸು. ನಿನ್ನ ಇಷ್ಟಾರ್ಥಗಳನ್ನೆಲ್ಲಾ ನೆರವೇರಿಸುತ್ತೇನೆ ಎಂದು ಹೇಳಿ ಕಣ್ಮರೆಯಾದಳು. ಸಾಕ್ಷಾತ್ ಮಹಾಲಕ್ಷ್ಮಿಯೇ ತನ್ನ ಕನಸಿನಲ್ಲಿ ಬಂದು ಅನುಗ್ರಹಿಸಿದ್ದನ್ನು ನೋಡಿ ಸಂತೋಷಗೊ0ಡ. ಚಾರುಮತಿಗೆ ತನ್ನ ಕನಸಿನ ಬಗ್ಗೆ ತನ್ನೆಲ್ಲಾ ಬಂಧು- ಮಿತ್ರರಿಗೆ ತಿಳಿಸಿ, ಶ್ರಾವಣ ಮಾಸದ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರ ಭಕ್ತಿ ಭಾವಗಳಿಂದ ಮಹಾಲಕ್ಷ್ಮಿಯನ್ನು ಆರಾಧನೆ ಮಾಡಿ ಆ ತಾಯಿಯ ಅನುಗ್ರಹ ಪಡೆಯುತ್ತಾಳೆ. ತದನಂತರ ಆಕೆಯ ಬಡತನವೂ ನೀಗುವುದಲ್ಲದೆ, ಆಕೆಯ ಅತ್ತೆ ಮತ್ತು ಮಾವನವರ ಖಾಯಿಲೆಗಳೂ ವಾಸಿಯಾಗುತ್ತದೆ. ಅಂದಿನಿ0ದ ಪ್ರತೀ ವರ್ಷ ಆಕೆ ತನ್ನ ಬಂಧು ಮಿತ್ರರೊಡನೆ ತಪ್ಪದೇ ಮಹಾಲಕ್ಷ್ಮಿಯ ವ್ರತಾಚರಣೆ ಮಾಡುತ್ತಾಳೆ.
ಈ ಪುರಾಣ ಕತೆಗಳ ಹಿನ್ನೆಲೆಯಲ್ಲಿ ವರ ಮಹಾಲಕ್ಷ್ಮಿವ್ರತ ಆಚರಣೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇಂದು ವರ ಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿ0ದ ಆಚರಿಸಲಾಯಿತು.
ಮನೆಗಳಲ್ಲಿ ಲಕ್ಷ್ಮಿ ವಿಗ್ರಹ ಪ್ರತಿಷ್ಠಾಪಿಸಿ, ವಿವಿಧ ಚಿನ್ನದ ಆಭರಣಗಳಿಂದ ಸಿಂಗಾರ ಮಾಡಿ, ಹೂವು ಮತ್ತು ಹಣದೊಂದಿಗೆ ಮಹಾಲಕ್ಷ್ಮಿಯನ್ನು ಪೂಜಿಸಿ, ಮುತ್ತೈದೆಯರನ್ನು ಆಹ್ವಾನಿಸಿ, ಅವರಿಗೆ ಬಾಗ್ಯನ ನೀಡಿ, ಆಶೀರ್ವಾದ ಪಡೆಯುವುದು ಸಾಮಾನ್ಯವಾಗಿತ್ತು.
ಇನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಶ್ರೀ ಚಾಮುಂಡೇಶ್ವರಿ ತಾಯಿಗೆ ನೋಟಿನ ಅಲಂಕಾರ ಮಾಡಲಾಗಿತ್ತು. ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ತಾಯಿ ಚಾಮುಂಡಿಗೆ ಹಣದಿಂದಲೇ ಅಲಂಕಾರ ಮಾಡಲಾಗಿದ್ದು ಅಮ್ಮನವರು ಆಕರ್ಷಣೀಯವಾಗಿ ಮಿಂಚುತ್ತಿದ್ದರು.
ಇನ್ನು ತುಮಕೂರು ಜಿಲ್ಲೆಯ ಲಕ್ಷ್ಮಿ ಆವಾಸ ಸ್ಥಾನವಾದ ಗೊರವನಹಳ್ಳಿಯಲ್ಲಿ ತಾಯಿ ಮಹಾ ಲಕ್ಷ್ಮಿಗೆ ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರದ ಜೊತೆಗೆ ವಿವಿಧ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ದೇವಾಲಯಗಳು ವರ ಮಹಾಲಕ್ಷ್ಮಿ ಹಬ್ಬ ಮತ್ತು ಶ್ರಾವಣ ಶುಕ್ರವಾರದ ಪ್ರಯುಕ್ತ ವಿಶೇಷ ಅಲಂಕಾರ ಮತ್ತು ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಒಟ್ಟಿನಲ್ಲಿ ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೂವು, ಹಣ್ಣು ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದರೂ ಲಕ್ಷ್ಮಿ ಯನ್ನು ಒಲಿಸಿಕೊಳ್ಳಲು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು ವಿಶೇಷವಾಗಿತ್ತು.