ಯುಪಿ ಉಪಚುನಾವಣೆ : ಲೋಕಸಭೆ ಸೋಲಿನ ಸೇಡು ತೀರಿಸಿಕೊಳ್ಳುವ ಬಿಜೆಪಿ ತಯಾರಿ
1 min readಲಖನೌ (ಉತ್ತರ ಪ್ರದೇಶ),ಜೂ.20- ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕವೂ ಇದೀಗ ಉತ್ತರ ಪ್ರದೇಶದಲ್ಲಿ ಉಪಚುನಾವಣೆಯ ಗಾಳಿ ಬೀಸಿದೆ. ರಾಜ್ಯದ ಖಾಲಿಯಿರುವ 10 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಗೆ ವೇದಿಕೆ ಸಿದ್ಧವಾಗಿದೆ. 10 ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಬಹುಜನ ಸಮಾಜ ಪಾರ್ಟಿ ಸಿದ್ಧತೆ ಆರಂಭಿಸಿದೆ.
ಇತ್ತ ಬಿಜೆಪಿಯೂ ಲೋಕಸಭಾ ಚುನಾವಣೆಯಲ್ಲಿ ಸೋತ ಸೇಡು ತೀರಿಸಿಕೊಳ್ಳಲು ಸಂಪೂರ್ಣ ಸಜ್ಜಾಗಿದ್ದು, ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿಗೆ ತೀವ್ರ ಪೈಪೋಟಿ ನೀಡಲು ತಯಾರಿ ನಡೆಸುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಈ ಬಾರಿ ಲೋಕಸಭಾ ಚುನಾವಣೆಯ ಜೊತೆಗೆ ಉತ್ತರ ಪ್ರದೇಶದ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯೂ ನಡೆದಿತ್ತು. ಈ ಎಲ್ಲ ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಎಸ್ಪಿ, ಎಲ್ಲ ಕ್ಷೇತ್ರಗಳಲ್ಲೂ ಸೋಲು ಅನುಭವಿಸಿತ್ತು. ಆದರೆ, ಇದೀಗ ಮತ್ತೆ ಧೈರ್ಯ ಕಳೆದುಕೊಳ್ಳದೇ, ಪಕ್ಷ ಇದೀಗ 10 ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಶೀಘ್ರದಲ್ಲೇ ಉತ್ತರ ಪ್ರದೇಶದಲ್ಲಿ ತೆರವಾಗಿರುವ 10 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಬಿಎಸ್‌ಪಿ ಮೂಲಗಳ ಪ್ರಕಾರ, ಪಕ್ಷ ತನ್ನದೇ ಸ್ವಂತ ಅಭ್ಯರ್ಥಿಗಳನ್ನು ಈ ಬಾರಿ ಕಣಕ್ಕಿಳಿಸಲಿದೆ. ಆದರೆ, ಬಿಜೆಪಿಯಿಂದ ಪ್ರಸ್ತಾಪ ಬಂದಲ್ಲಿ, 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಯಾಕೆಂದರೆ ಎಸ್‌ಪಿ ಹಾಗೂ ಕಾಂಗ್ರೆಸ್‌ನ ಮೈತ್ರಿಯಿಂದಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ದೊಡ್ಡ ಹೊಡೆತ ತಿಂದಿವೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಹಾಗೂ ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ದೇಶಾದ್ಯಂತ ಲೋಕಸಭಾ ಚುನಾವಣೆ ಜೊತೆಗೆ ಕೆಲವು ವಿಧಾನಸಭಾ ಸ್ಥಾನಗಳು ತೆರವಾಗಿದ್ದ ರಾಜ್ಯಗಳಲ್ಲಿ ಉಪಚುನಾವಣೆಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ 4 ಸ್ಥಾನಗಳಿಗೆ ಉಪಚುನಾವಣೆ ನಡೆದಿದೆ. ಎಲ್ಲಾ ರಾಜಕೀಯ ಪಕ್ಷಗಳು ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು. ಆದರೆ ಬಹುಜನ ಸಮಾಜ ಪಕ್ಷ 2024ರಲ್ಲಿ ಮೊದಲ ಬಾರಿಗೆ ಉಪಚುನಾವಣೆಯಲ್ಲಿ ಭಾಗವಹಿಸಿದೆ. ನಾಲ್ಕು ಸ್ಥಾನಗಳಿಗೆ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಸ್ವಂತ ಬಲದಿಂದಲೇ ಉಪಚುನಾವಣೆಯಲ್ಲಿ ಸ್ಪರ್ಧಿಸಿತ್ತು.
ಸೋನಭದ್ರದ ದುದ್ಧಿ, ಷಹಜಹಾನ್‌ಪುರದ ದಾದ್ರೌಲ್, ಬಲರಾಮ್‌ಪುರದ ಗಸ್ದಿ ಮತ್ತು ಲಖನೌನ ಪೂರ್ವ ಅಸೆಂಬ್ಲಿ ಸೇರಿ 4 ಸ್ಥಾನಗಳ ಬಿಎಸ್‌ಪಿ ಅಭ್ಯರ್ಥಿಗಳು ಉಪಚುನಾಚಣೆಯಲ್ಲಿ ಹೀನಾಯ ಸೋಲನಭವಿಸಿದ್ದರು. ದಾದ್ರೌಲ್ ಕ್ಷೇತ್ರದ ಪಕ್ಷದ ಅಭ್ಯರ್ಥಿ ಮಾತ್ರ ಕೊಂಚ ಉತ್ತಮ ಪ್ರದರ್ಶನ ನೀಡಿದ್ದರು. ಆದರೂ ಇದೀಗ ಮತ್ತೆ 10 ಸ್ಥಾನಗಳಿಗೆ ನಡೆಯುವ ಉಪಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕಿಳಿಸಲಿದ್ದಾರೆ ಎನ್ನುತ್ತವೆ ಪಕ್ಷದ ಮೂಲಗಳು.
ಉತ್ತರ ಪ್ರದೇಶದ 79 ಲೋಕಸಭಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಎಸ್‌ಪಿ, ಇಲ್ಲೂ ಖಾತೆ ತೆರೆಯುವಲ್ಲಿ ವಿಲವಾಗಿದೆ. ಬಿಎಸ್‌ಪಿಯ ಯಾವ ಅಭ್ಯರ್ಥಿಯೂ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿಲ್ಲ.
ಭಾರತೀಯ ಜನತಾ ಪಕ್ಷ ಹಾಗೂ ಸಮಾಜವಾದಿ ಪಕ್ಷದ ಅನೇಕ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ಹಾಗಾಗಿ ಆಸ್ಥಾನಗಳು ಈಗ ತೆರವಾಗಿವೆ. ಉಪಚುನಾವಣೆ ನಡೆಯಲಿರುವ ಆ ಹತ್ತು ಕ್ಷೇತ್ರಗಳೆಂದರೆ, ಮೈನ್‌ಪುರಿಯ ಕರ್ಹಾಲ್, ಅಯೋಧ್ಯೆ ಮಿಲ್ಕಿಪುರ, ಮೊರಾದಾಬಾದ್‌ನ ಕುಂದರ್ಕಿ, ಗಾಜಿಯಾಬಾದ್‌ನ ಸದರ್, ಮಿರ್ಜಾಪುರ ಜಿಲ್ಲೆಯ ಮಜ್ವಾಲ್, ಅಂಬೇಡ್ಕರ್ ನಗರದ ಕತೇಹಾರಿ, ಪ್ರಯಾಗ್‌ರಾಜ್‌ನ ಲ್‌ಪುರ, ಮುಜಾಫರ್‌ನಗರದ ಮೀರಾಪುರ, ಅಲಿಗಢದ ಖೇರ್ ಕ್ಷೇತ್ರ, ಕಾನ್ಪುರದ ಸಿಸಮೌ.
ಮಾಯಾವತಿ 6 ತಿಂಗಳು ಸಿಎಂ ಆಗಿ, ಕಲ್ಯಾಣ್‌ಸಿಂಗ್ ಸಿಎಂ ಆದ ತಕ್ಷಣ ಮೈತ್ರಿ ಮುರಿದುಕೊಂಡರು. ಐದು ವರ್ಷಗಳ ನಂತರ, 2002ರಲ್ಲಿ ಮಾಯಾವತಿ ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು.
ನಂತರ ಬಿಜೆಪಿ ಮತ್ತು ಬಿಎಸ್ಪಿ ಒಟ್ಟಾಗಿ ಸರ್ಕಾರ ರಚಿಸಿದವು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಾಯಾವತಿ ಮೂರನೇ ಬಾರಿಗೆ ಸಿಎಂ ಆದರು. 2007ರಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದಾಗ, ಬಿಎಸ್ಪಿ ಪೂರ್ಣ ಬಹುಮತ ಪಡೆದು ಮೊದಲ ಬಾರಿಗೆ ಸ್ವಂತ ಬಲದಿಂದ ಸಿಎಂ ಆದರು. ಮೊದಲ ಬಾರಿಗೆ ಅವರು ಪೂರ್ಣ ಐದು ವರ್ಷಗಳ ಕಾಲ ಸರ್ಕಾರವನ್ನು ನಡೆಸಿದರು.