ಚುಂಚನಹಳ್ಳಿಯಲ್ಲಿ ವಿಶಿಷ್ಟ ಊಸರವಳ್ಳಿ ಪತ್ತೆ
1 min read
ಚುಂಚನಹಳ್ಳಿಯಲ್ಲಿ ವಿಶಿಷ್ಟ ಊಸರವಳ್ಳಿ ಪತ್ತೆ
ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ಜನ
ಕಣ್ಣು ಕೋರೈಸುವ ಹಸಿರು ಬಣ್ಣದ ಜೊತೆಗೆ ತನ್ನ ನಿಧಾನ ನಡಿಗೆಯೊಂದಿಗೆ ಹೊರಟ ಈ ಜೀವಿ ಪರಿಸರದ ಹಿನ್ನೆಲೆಗೆ ತಕ್ಕಂತೆ ತನ್ನ ಮೈಬಣ್ಣ ಬದಲಿಸುವ ಗುಣ ಹೊಂದಿದೆ. ತಲೆಯ ಮೇಲೆ ಕಿರೀಟದಂತಹ ಜುಟ್ಟು ಹೊಂದಿದ್ದ ಇದು ತನ್ನ ದೇಹವನ್ನು ಹಿಂದಕ್ಕೂ ಮುಂದಕ್ಕೂ ತೂಗಾಡಿಸುತ್ತ ವಿಶಿಷ್ಟ ಶೈಲಿಯಲ್ಲಿ ನಡೆಯುತ್ತಿತ್ತು. ಇಷ್ಟಕ್ಕೂ ಯಾವುದು ಆ ವಿಶಿಷ್ಟ ಪ್ರಾಣಿ ಅಂತೀರಾ? ನೀವೇ ನೋಡಿ.
ಇದು ದಕ್ಷಿಣ ಭಾರತದಲ್ಲಿ ಸಿಗುವ ಏಕ ಮಾತ್ರ ಊಸರವಳ್ಳಿ ಎನ್ನಲಾಗಿದೆ. ವಿಶ್ವದಾದ್ಯಂತ ಊಸರವಳ್ಳಿಗಳು ಅನೇಕ ತಳಿಯಲ್ಲಿ ಇವೆಯಾದರೂ, ಈ ಊಸರವಳ್ಳಿ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿದೆ ಎನ್ನುತ್ತಾರೆ ಪ್ರಾಣಿ ತಜ್ಞರು. ಇಲ್ಲಿನ ಹವಾಗುಣಕ್ಕೆ ಮಾತ್ರ ಹೊಂದಿಕೊಳ್ಳುವ ಶಕ್ತಿ ಇರುವ ಈ ವಿಶಿಷ್ಟ ಊಸರವಳ್ಳಿ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ರಸ್ತೆ ದಾಟುತ್ತಿರುವಾಗ ಕೋಣನೂರು ಲೋಕೇಶ್ ಎಂಬುವರು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ.
ಊಸರವಳ್ಳಿಯ ಕಾಲಿನ ಬೆರಳುಗಳ ರಚನೆ ಗಿಣಿಯ ಕಾಲಿನ ರೀತಿಯಿದ್ದು, ಎರಡು ಬೆರಳು ಹಿಂದೆ ಹಾಗು ಮೂರು ಬೆರಳು ಮುಂದೆ ಇದೆ. ಮರಗಿಡಗಳ ರೆಂಬೆಗಳನ್ನು ಹಿಡಿದುಕೊಂಡು ಹತ್ತುತ್ತಾ ತನ್ನ ದೃಷ್ಟಿ ಶಕ್ತಿಯಿಂದ ಬೇಟೆಯಾಡುವುದನ್ನೇ ಇವು ಅಭ್ಯಾಸ ಮಾಡಿಕೊಂಡಿರುವ ಇವು. ತಮ್ಮ ಆಹಾರವನ್ನು ತನ್ನ ದೇಹದಷ್ಟೆ ಉದ್ದವಾದ ನಾಲಿಗೆಯಿಂದ ಮನುಷ್ಯನ ಕಣ್ಣುಗಳು ಗುರುತಿಸಲಾಗದ ವೇಗದಿಂದ ಹೊರ ಚಾಚಿ ಒಳ ಸೆಳೆಯುತ್ತದೆ. ಇರುವೆಗಳು, ಮಿಡತೆಗಳು ಹಾಗೂ ಅನೇಕ ಕೀಟಗಳನ್ನು ಭಕ್ಷಿಸುತ್ತದೆ. ಅಲ್ಲದೆ ಸಾಮಾನ್ಯವಾಗಿ ಇವುಗಳು ಹದ್ದುಗಳು ಮತ್ತು ಹಾವುಗಳಿಗೂ ಆಹಾರವಾಗುತ್ತವೆ ಎಂಬುದು ಸಂಗ್ರಹಿಸಿದ ಮಾಹಿತಿಯಲ್ಲಿ ತಿಳಿದುಬಂದಿದೆ.