ಮಲ್ಲೂಪುರದಲ್ಲಿ ಬೈಕ್ ಟ್ಯಾಂಕರ್ ನಡುವೆ ಅಪಘಾತ ಅಪಘಾತದ ರಭಸಕ್ಕೆ ಇಬ್ಬರು ಯುವ ಕಾರ್ಮಿಕರು ಬಲಿ ಸಾವಿನಲ್ಲು ಒಂದಾದ ಕುಚುಕು ಗೆಳೆಯರು
1 min readಬೈಕ್ ಮತ್ತು ಟ್ಯಾಂಕರ್ ನಡುವೆ ನಡೆದ ಅಪಘಾತದಲ್ಲಿ ಬೈಕಿನಲ್ಲಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ಬುಧವಾರ ನಡೆದಿದೆ.
ನಂಜನಗೂಡು ತಾಲ್ಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಮೃತಪಟ್ಟಿದ್ದು, ಬುಧವಾರ ಬೆಳಗ್ಗೆ ಕಾರ್ಖಾನೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಮಲ್ಲೂಪುರ ಗ್ರಾಮದಲ್ಲಿ ಕಾರ್ಮಿಕರು ತೆರಳುತ್ತಿದ್ದ ಬೈಕ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಗಡೂರು ಗ್ರಾಮದ ಶಿವಮಲ್ಲೆಗೌಡ ಎಂಬುವವರ ಪುತ್ರ 24 ವರ್ಷದ ಮಹೇಶ್, ಮತ್ತು ಅದೇ ಗ್ರಾಮದ ನಾಗರಾಜು ಎಂಬುವವರ ಪುತ್ರ 23 ವರ್ಷದ ಮಹೇಶ್ ಮೃತ ಯುವ ಕಾರ್ಮಿಕರಾಗಿದ್ದು, ಸಾವಿನಲ್ಲೂ ಕುಚುಕು ಗೆಳೆಯರು ಒಂದಾಗಿದ್ದಾರೆ.
ತಗಡೂರು ಗ್ರಾಮದಿಂದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಕೆಲಸಕ್ಕೆ ಇಬ್ಬರು ಕಾರ್ಮಿಕರು ಹೋಗುತ್ತಿದ್ದ ವೇಳೆ, ಟ್ಯಾಂಕರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮಹೇಶ್ ಮೃತಪಟ್ಟಿದ್ದರು. ಮತ್ತೊಬ್ಬ ಯುವಕ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ವರುಣ ಕ್ಷೇತ್ರದ ಮಾಜಿ ಶಾಸಕ ಡಾ. ಯತೀಂದ್ರ ಸಿದ್ರಾಮಯ್ಯ ಭೇಟಿ ನೀಡಿ ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಬಿಳಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಟ್ಯಾಂಕರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ಯಾಂಕರ್ ಚಾಲಕ ನಾಪತ್ತೆಯಾಗಿದ್ದಾನೆ.
ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.