ಠುಸ್ ಆದ ಖಾಸಗಿ ಶಾಲೆಗಳ ಹೋರಾಟ
1 min readಠುಸ್ ಆದ ಖಾಸಗಿ ಶಾಲೆಗಳ ಹೋರಾಟ!
ಕರಾಳ ದಿನವಾಗಿ ಆಚರಿಸುವ ಎಚ್ಚರಿಕೆ ನೀಡಿದ್ದ ಒಕ್ಕೂಟ
ಖಾಸಗಿ ಶಾಲೆ ಮಕ್ಕಳು ಸ್ವಾತಂತ್ರ್ಯಸಂಭ್ರಮದಲ್ಲಿ ಭಾಗಿ
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಸ್ವಾತಂತ್ರ್ಯದಿನಚಾರಣೆಯನ್ನು ಕರಾಳದಿನವಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದ ಖಾಸಗಿ ಶಾಲೆಗಳ ಒಕ್ಕೂಟದ ಹೋರಾಟ ಠುಸ್ ಆಗಿದೆ. ಬಹುತೇಕ ಎಲ್ಲ ಖಾಸಗಿ ಶಾಲೆಗಳು ಜಿಲ್ಲಾಡಳಿತದಿಂದ ಇಂದು ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಮೂಲಕ ಹೋರಾಟಕ್ಕೆ ತಿಲಾಂಜಲಿ ಇಡಲಾಗಿದೆ.
ಹೌದು, ಖಾಸಗಿ ಶಾಲೆಗಳ ಮಾಲೀಕರಿಗೆ ಶಿಕ್ಷಣ ಇಲಾಖೆಯಿಂದ ತೀವ್ರ ಕಿರುಕುಳ ನೀಡಲಾಗುತ್ತಿದೆ, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಹಣ ನೀಡದಿದ್ದರೆ ಯಾವುದೇ ಕೆಲಸ ಆಗುತ್ತಿಲ್ಲ, ಸರ್ಕಾರಿ ಶಾಲೆಗೊಂದು ಕಾನೂನು, ಖಾಸಗಿ ಶಾಲೆಗಳಿಗೆ ಮತ್ತೊಂದು ಕಾನೂನು ಎಂಬ ಸ್ಥಿತಿ ಇದೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಸುದ್ದಿಗೋಷ್ಟಿ ನಡೆಸಿ ತೀವ್ರ ಆರೋಪಗಳ ಸುರಿಮಳೆ ಮಾಡಿತ್ತು. ಸಾಲದೆಂಬ0ತೆ ಎರಡು ದಿನದ ಹಿಂದೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ನೀಡಿದ್ದ ಖಾಸಗಿ ಶಾಲೆಗಳ ಒಕ್ಕೂಟದ ಪದಾಧಿಕಾರಿಗಳು ಕರಾಳ ದಿನ ಆಚರಿಸುವ ಬಗ್ಗೆ ಮನವಿಯನ್ನೂ ಸಲ್ಲಿಸಿದ್ದರು.
ನೆನೆಯವರೆಗೂ ಶಿಕ್ಷಣ ಇಲಾಖೆ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಖಾಸಗಿ ಶಾಲೆಗಳ ಒಕ್ಕೂಟ ತಾವು ಪ್ರತ್ಯೇಕವಾಗಿ ಸ್ವಾತಂತ್ರ್ಯ ದಿನಾಚರಣೆ ನಡೆಸಲಿದ್ದೇವೆ. ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸದೆ ಬಹಿಷ್ಕಾರ ಹಾಕುವುದಾಗಿ ಹೇಳುತ್ತಲೇ ಇದ್ದ ಒಕ್ಕೂಟದ ಪದಾಧಿಕಾರಿಗಳು, ದಿನಬೆಳಗಾಗುವಷ್ಟರಲ್ಲಿ ಏನಾಯಿತು ಎಂಬ ಮಾಹಿತಿಯನ್ನೂ ನೀಡದೆ ಜಿಲ್ಲಾಡಳಿತದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹೋರಾಟಕ್ಕೆ ತಿಲಾಂಜಲಿ ನೀಡಿದ್ದಾರೆ.
ದೇಶದ ಸ್ವಾತಂತ್ರ್ಯ ದಿನಾಚರಣೆಯಂತಹ ಸಂಭ್ರಮವನ್ನೂ ಕರಾಳದಿನವಾಗಿ ಆಛರಿಸುವ ಬಗ್ಗೆ ಘೋಷಣೆ ಮಾಡಿದ್ದ ಖಾಸಗಿ ಶಾಲೆಗಳ ಒಕ್ಕೂಟ ಯಾಕೆ ಹಿಂದೆ ಸರಿಯಿತು, ಶಿಕ್ಷಣ ಇಲಾಖೆ ಇವರ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿದೆಯಾ, ಇಲ್ಲವೇ ಎಚ್ಚರಿಕೆ ನೀಡಿದೆಯಾ ಎಂಬ ಯಾವುದೇ ಮಾಹಿತಿಯನ್ನು ಈವರೆಗೂ ಖಾಸಗಿ ಶಾಲೆಗಳ ಒಕ್ಕೂಟ ನೀಡಿಲ್ಲವಾದರೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಮ್ಮ ತಮ್ಮ ಶಾಲೆಯ ಮಕ್ಕಳನ್ನು ಭಾಗವಹಿಸುವ ಮೂಲಕ ಸೈಲೆಂಟಾಗಿರಾಟ ಕೈಬಿಟ್ಟಿದೆ.
ಇನ್ನು ಶಿಕ್ಷಣ ಇಲಾಖೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದರೂ ಈವರೆಗೆ ಶಿಕ್ಷಣ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿದೆ. ಜೊತೆಗೆ ಸ್ವಾತಂತ್ರ್ಯ ದಿನವನ್ನೂ ಕರಾಳ ದಿನವಾಗಿ ಆಚರಿಸುವ ಘೋಷಣೆ ಮಾಡಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.