ಟೀಮ್ ಇಂಡಿಯಾಕ್ಕೆ ದೊಡ್ಡ ಬೆಂಬಲ ಇರುತ್ತದೆ, ಅದನ್ನು ಎದುರಿಸುವುದೇ ತಂಡಕ್ಕೆ ಸವಾಲು ಕಮಿನ್ಸ್
1 min readವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾಕ್ಕೆ ಹೆಚ್ಚಿನ ಅಭಿಮಾನಿಗಳು ಇರುತ್ತಾರೆ ಅವರ ಮುಂದೆ ಆಡಲು ತಂಡದ ಆಟಗಾರರು ಸಿದ್ಧರಾಗಬೇಕು ಎಂದು ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಟೀಮ್ ಇಂಡಿಯಾಕ್ಕೆ ದೊಡ್ಡ ಬೆಂಬಲ ಇರುತ್ತದೆ, ಅದನ್ನು ಎದುರಿಸುವದೇ ತಂಡಕ್ಕೆ ಸವಾಲು – ಪ್ಯಾಟ್ ಕಮಿನ್ಸ್
ಅಹಮದಾಬಾದ್ (ಗುಜರಾತ್): ಅತಿ ಹೆಚ್ಚು ಪ್ರೇಕ್ಷಕರು ಕುಳಿತು ವೀಕ್ಷಿಸಬಹುದಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತಕ್ಕೆ ಹೆಚ್ಚಿನ ಬೆಂಬಲ ಇರುತ್ತದೆ. ಈ ಬೆಂಬಲವನ್ನು ಎದುರಿಸಲು ಆಟಗಾರರು ಸಿದ್ಧರಾಗಬೇಕು ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಫೈನಲ್ ಪಂದ್ಯಕ್ಕೂ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಐದು ಬಾರಿ ವಿಶ್ವ ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡ ರೋಹಿತ್ ಪಡೆಯನ್ನು ಇಲ್ಲಿಯೇ ಎದುರಿಸುತ್ತಿರುವುದರಿಂದ, ಬಹುತೇಕ ಅಭಿಮಾನಿಗಳು ಬ್ಲೂ ಜರ್ಸಿಯನ್ನೇ ಬೆಂಬಲಿಸುತ್ತಾರೆ. ಅಲ್ಲದೇ ಟೀಮ್ ಇಂಡಿಯಾದ ಬಗ್ಗೆ ಈಗಾಗಲೇ ಕ್ರೇಜ್ ಹೆಚ್ಚಾಗಿದ್ದು, ಟೂರ್ನಿ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಪಡೆಯೇ ಗೆಲುವಿನ ಫೇವರಿಟ್ ಕೂಡಾ ಆಗಿದೆ.
ಭಾರತದ ಫ್ಯಾನ್ಸ್ ಮೌನವಾಗಿಸುವುದೇ ಗುರಿ: “ಅಭಿಮಾನಿಗಳು ನಿಸ್ಸಂಶಯವಾಗಿ ಏಕಪಕ್ಷೀಯವಾಗಿರುತ್ತಾರೆ. ಆ ಒಂದು ಬದಿಯ ಅಭಿಮಾನಿಗಳನ್ನು ಮೌನವಾಗಿಸುವ ಗುರಿ ನಮ್ಮದು. ಫೈನಲ್ ಎಂದಾಕ್ಷಣ ಪ್ರತಿಕ್ಷಣವನ್ನು ಜೀವಿಸಬೇಕಾಗುತ್ತದೆ. ಅಲ್ಲಿ ಏಳುವ ಶಬ್ದದ ಅಲೆಗಳ ಜೊತೆ ಜೀವಿಸಲು ಕಲಿಯಬೇಕು. ಏನಾಗುತ್ತದೆ ಎಂಬುದನ್ನು ಈಗಲೇ ಯೋಚಿಸದೇ, ದಿನವನ್ನು ವಿಷಾದ ರಹಿತವಾಗಿರಿಸಲು ಬಯಸುತ್ತೇವೆ” ಎಂದು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಭಾರತ ತಂಡ 2023ರ ವಿಶ್ವಕಪ್ನಲ್ಲಿ ಯಾವುದೆ ಸೋಲು ಕಂಡಿಲ್ಲ. ಆಡಿದ 10 ಪಂದ್ಯಗಳನ್ನು ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ಮೊದಲೆರಡು ಪಂದ್ಯಗಳನ್ನು ಕಳೆದುಕೊಂಡಿದ್ದು, ನಂತರ ಸತತ 8 ಗೆಲುವು ತನ್ನದಾಗಿಸಿಕೊಂಡು ಫೈನಲ್ ಪ್ರವೇಶ ಪಡೆದುಕೊಂಡಿದೆ. ಭಾರತದ ಎಲ್ಲಾ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ಗೆ
ಪ್ರವೇಶಿಸಿದೆ. ಆಸ್ಟ್ರೇಲಿಯಾ ನಾಯಕ ಕಮಿನ್ಸ್ ತಮ್ಮ ತಂಡ ಯಾವುದೇ ತಂಡದ ವಿರುದ್ಧವೂ ತಮ್ಮ ನೈಜ ಪ್ರದರ್ಶನ ತೋರಿಲ್ಲ ಎಂದು ಹೇಳಿದ್ದಾರೆ.
ಆಟಗಾರರ ಮೇಲಿನ ವಿಶ್ವಾಸ: “ನಮ್ಮ ನೈಜ ಪ್ರದರ್ಶನ ವಿಶ್ವಕಪ್ನಲ್ಲಿ ಇನ್ನೂ ಮೂಡಿ ಬಂದಿಲ್ಲ. ನೆದರ್ಲೆಂಡ್ಸ್ ವಿರುದ್ಧ ಮಾತ್ರ ಕಂಡುಬಂದಿದೆ ಎಂದು ಹೇಳುತ್ತೇನೆ. ಯಾವುದೇ ತಂಡವನ್ನು ಎದುರಿಸಲು ಸ್ಥಿರವಾದ ಪ್ರದರ್ಶನದ ಅಗತ್ಯ ಇಲ್ಲ ಎಂದು ನಾನು ಭಾವಿಸುತ್ತೇನೆ. ಪ್ರತಿ ಗೆಲುವಿಗಾಗಿ ನಾವು ಹೋರಾಡಬೇಕಾಗಿತ್ತು ಮತ್ತು ನಾವು ಗೆಲ್ಲಲು ಒಂದು ಮಾರ್ಗವನ್ನು ಕಂಡುಕೊಂಡಿದ್ದೇವೆ. ವಿಭಿನ್ನ ಆಟಗಾರರು ವಿಭಿನ್ನ ಸಮಯದಲ್ಲಿ ನಿಂತು ಆಡಿ ಗೆಲ್ಲಿಸಿದ್ದಾರೆ. ಯಾವುದೇ ತಂಡಕ್ಕೆ ಸವಾಲು ಹಾಕಲು ನಾವು ನಮ್ಮ ಸಂಪೂರ್ಣ ಉತ್ತಮ ಸ್ಥಿತಿಯಲ್ಲಿರಬೇಕಾಗಿಲ್ಲ. ವಿಶ್ವಾಸ ಇಟ್ಟುಕೊಂಡು ಆಡಿದರೆ ಗೆಲ್ಲಬಹುದು ಎಂದು ಭಾವಿಸುತ್ತೇನೆ. ನಾಳೆ ತಂಡದ ಎಲ್ಲ ಆಟಗಾರರು ಅದೇ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿಯುತ್ತಾರೆ” ಎಂದು ಕಮಿನ್ಸ್ ತಿಳಿಸಿದ್ದಾರೆ.
ಪಿಚ್ ಗಮನಿಸಿರುವುದಾಗಿ ಹೇಳಿರುವ ಕಮಿನ್ಸ್, ಕೋಲ್ಕತ್ತಾದಲ್ಲಿ ಸ್ಪಿನ್ನರ್ಗಳನ್ನು ಎದುರಿಸಿದಂತೆ ಇಲ್ಲಿನ ಸವಾಲಿಗೆ ತಂಡ ಸಜ್ಜಾಗಿದೆ ಎಂದಿದ್ದಾರೆ. ಹಾಗೇ ಎರಡನೇ ಇನ್ನಿಂಗ್ಸ್ನ ಕೊನೆಯ ಓವರ್ ವೇಳೆಗೆ ಬರಬಹುದಾದ ಮಂಜಿನ ನಿರೀಕ್ಷೆಯನ್ನು ಇಟ್ಟು ಪಂದ್ಯದ ಯೋಜನೆ ರೂಪಿಸುವುದಾಗಿ ಹೇಳಿದ್ದಾರೆ. “ಈ ನಗರ ಮತ್ತು ಸ್ಥಳವು ನಾವು ಆಡುವ ಇತರ ಸ್ಥಳಗಳಿಗಿಂತ ಹೆಚ್ಚು ಇಬ್ಬನಿ ಹೊಂದಿರುವಂತೆ ತೋರುತ್ತಿದೆ. ನಾಳೆ ಇದರ ಬಗ್ಗೆ ಖಂಡಿತಾ ಯೋಚಿಸಬೇಕಾಗುತ್ತದೆ. ಮಂಜು ಕೊನೆಯ 30 ಓವರ್ಗಳಲ್ಲಾದರೂ ಕಾಡುವ ನಿರೀಕ್ಷೆ ಇದೆ. ಮೊದಲ 20 ಓವರ್ ಬಾಲ್ ಸ್ವಿಂಗ್ ಆಗಬಹುದು ಎಂದು ನಿರೀಕ್ಷಿಸಬಹುದು” ಎಂದಿದ್ದಾರೆ.