ತುಮಕೂರು ಜಿಲ್ಲೆಯಲ್ಲಿ ರೇಬೀಸ್ ಲಸಿಕೆಯೇ ಇಲ್ಲ!
1 min readತುಮಕೂರು ಜಿಲ್ಲೆಯಲ್ಲಿ ರೇಬೀಸ್ ಲಸಿಕೆಯೇ ಇಲ್ಲ!
ನಾಯಿ ಕಡಿದು ಆಸ್ಪತ್ರೆಗೆ ಬಂದರೆ ಖಾಸಗಿ ಅಂಗಡಿಗಳೇ ಗತಿ
ಈ ಬಗ್ಗೆ ದೂರು ನೀಡಿದರೂ ಗಮನ ಹರಿಸದ ಜಿಲ್ಲಾಧಿಕಾರಿಗಳು
ಜಿಲ್ಲಾಡಳಿತದ ನಿರ್ಲಕ್ಯದ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ
ತುರುವೇಕೆರೆ ತಾಲೂನ ಕಲ್ಲೂರು ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಗ್ರಾಮದಲ್ಲಿ 500ಕ್ಕೂ ಹೆಚ್ಚು ನಾಯಿಗಳಿದ್ದು, ಅವುಗಳಲ್ಲಿ ಹಲವು ನಾಯಿಗಳಿಗೆ ಹುಚ್ಚು ಹಿಡಿದಿರುವ ಆತಂಕವೂ ಇದೆ. ಕಳೆದ ಕೆಲ ದಿನಗಳ ಹಿಂದೆ ಕಲ್ಲೂರು ಗ್ರಾಮದ ವೃದ್ದೆಯೊಬ್ಬರ ಮೇಲೆ ನಾಯಿಗಳು ದಾಳಿ ನಡೆಸಿ ತೀವ್ರ ಗಾಯಗೊಳಿಸಿರುವ ಘಟನೆಯೂ ನಡೆದಿದೆ.
ನಾಯಿಗಳ ಕಡಿತದಿಂದ ವೃದ್ದೆ ತೀವ್ರ ಗಾಯಗೊಂಡಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲು ಸ್ಥಳೀಯ ಆಸ್ಪತ್ರೆಯಲ್ಲಿ ಆಂಟಿ ರೇಬಿಸ್ ಲಸಿಕೆ ಲಭ್ಯವಿಲ್ಲದೆ ಹೆಚ್ಚಿನ ಚಿಕಿತ್ಸೆಗೆ ವೃದ್ಧೆಯನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಯೂ ಲಸಿಕೆ ಲಭ್ಯವಿಲ್ಲದೆ ತೊಂದರೆಯಾಗಿದ್ದು, ಗಾಯಗಳಿಂದ ನರಳುತ್ತಿದ್ದಾಗ ಖಾಸಗಿ ಔಷಧ ಅಂಗಡಿಯಿದ ಲಸಿಕೆ ತರಿಸಿ ಚಿಕಿತ್ಸೆ ನೀಡಲಾಗಿದೆ.
ನಾಯಿ ಕಡಿತದ ಲಸಿಕೆ ಕೊರತೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಡಿಹೆಚ್‌ಒ ನೇರ ಹೊಣೆಯಾಗಿದ್ದು, ಇದರ ಜವಾಬ್ದಾರಿ ಇವರೇ ಹೊರಬೇಕಾಗಿದೆ, ಎಂದು ತುರುವೇಕೆರೆ ಮಾಜಿ ಶಾಸಕ ಮಸಾಲ ಜಯರಾಮ್ ಆರೋಪಿಸಿದ್ದಾರೆ. ತುರುವೇಕೆರೆ ಸಮೀಪದ ತಮ್ಮ ಫಾರ್ಮ್ಹೌಸ್ ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ಕಲ್ಲೂರು ಗ್ರಾಮದ ಶಾಲೆಗೆ ಹೋಗುವ ಚಿಕ್ಕ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿವೆ. ಇದರ ಜವಾಬ್ದಾರಿಯನ್ನು ಯಾರು ಹೊರಬೇಕಾಗಿದೆ, ಲಸಿಕೆಗಳು ಲಭ್ಯವಿಲ್ಲದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ ಎಂದು ಮಸಾಲಾ ಜಯರಾಂ ಆರೋಪಿಸಿದ್ದಾರೆ.
ಈವರೆಗೂ ನಾಯಿ ಕಡಿತದಿಂದ ಇಬ್ಬರು ಮೃತಪಟ್ಟಿದ್ದು, ಸುಮಾರು ಜನರನ್ನು ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಇದರ ಬಗ್ಗೆ ಜಿಲ್ಲಾಡಳಿತವಾಗಲಿ ತಾಲ್ಲೂಕು ಆಡಳಿತವಾಗಲಿ ತಲೆ ಕೆಡಿಸಿಕೊಳ್ಳದೆ ಅಮಾಯಕರ ಪ್ರಾಣಗಳ ಜೊತೆ ಚೆಲ್ಲಾಟವಾಡುತ್ತಿರುವುದು ವಿಪರ್ಯಾಸ. ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದರು.
ಈವರೆಗೆ ನಾಯಿಗಳ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿ ಮೂರು ತಿಂಗಳಾದರೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿ ಪರಿಶೀಲಿಸಿಲ್ಲ. ಜಿಲ್ಲಾಧಿಕಾರಿಗಳಾಗಲಿ ಜಿಲ್ಲಾಯ ಆರೋಗ್ಯ ಇಲಾಖೆಯವರಾಗಲಿ ತಾಲೂಕು ಪಂಚಾಯಿತಿಯವರಾಗಲಿ ಭೇಟಿ ನೀಡಿ ಮಾಹಿತಿ ಪಡೆಯದಿರುವುದು ದುರಂತವಾಗಿದೆ ಎಂದು ಅವರು ಆರೋಪಿಸಿದ್ದಾರೆ
ನಾಯಿಗಳ ದಾಳಿಯಿಂದ ಸಾವು ನೋವು ಸಂಭವಿಸಿದರೆ ಶವಜಿಲ್ಲಾಧಿಕಾರಿಗಳ ವಸತಿ ಸಮುಚ್ಚಯದ ಮುಂದೆ ಇಟ್ಟು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿರುವ ಮಾಜಿ ಶಾಸಕರು, ಇದರ ಹೊಣೆಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾಧಿಕಾರಿಗಳು ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಬೇರೆಲ್ಲಾ ವಿಚಾರಗಳಿಗೆ ಮೂಗು ತೂರಿಸುತ್ತಿದ್ದು, ಈ ವಿಚಾರ ಅವರ ಗಮನಕ್ಕೆ ಬಾರದಿರುವುದು ವಿಷಾಧಕರ ಎಂದು ಆರೋಪಿಸಿದರು.
ತುಮಕೂರು ಜಿಲ್ಲಾಯ ಯಾವ ಆಸ್ಪತ್ರೆಯಲ್ಲೂ ರೇಬಿಸ್ ಲಸಿಕೆ ಇಲ್ಲದಿರುವುದು, ಇವುಗಳನ್ನು ಖರೀದಿ ಮಾಡಲು ಸರ್ಕಾರದ ಬಳಿ ಹಣವಿಲ್ಲದಿರುವುದು ನಾಚಿಕೆಗೇಡಿನ ಸಂಗತಿ, ಈ ವಿಚಾರದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಡಿಎಚ್‌ಒ ನಿರ್ಲಕ್ಯತೆ ಎದ್ದು ಕಾಣುತ್ತಿದ್ದು, ಸರ್ಕಾರ ಔಷಧಿ ಖರೀದಿ ಮಾಡಲು ಹಣವಿಲ್ಲದೆ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಗ್ರಾಮದಲ್ಲಿ ರಾತ್ರಿಯ ವೇಳೆ ನಾಯಿಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಅವುಗಳಿಗೆ ಕಡಿವಾಣ ಹಾಕಬೇಕಿದೆ. ಇದರಿಂದ ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿ ಹೇಳತೀರದಾಗಿದ್ದು, ಪೋಷಕರು ಕೈಯಲ್ಲಿ ದೊಣ್ಣೆ ಹಿಡಿದು ಮಕ್ಕಳನ್ನು ಕರೆದೊಯ್ದು ಶಾಲೆಗೆ ಬಿಟ್ಟು ಬರುವ ಸ್ಥಿತಿ ಎದುರಾಗಿದೆ. ಕೆಲ ಮಕ್ಕಳಂತೂ ಮನೆಯಲ್ಲಿಯೇ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಪರಿಹಾರ ಮಾಡಬೇಕು, ಇಲ್ಲವಾದಲ್ಲಿ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.