ಶಭ್ಬಾಷ್ ಮೊದಲ ಹಂತದ ಚಿತ್ರೀಕರಣ ಮುಕ್ತಾಯ!
1 min readಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಮುಹೂರ್ತ ಕಂಡಿದ್ದ `ಶಭ್ಬಾಷ್’ ಚಿತ್ರ ಅತ್ಯಂತ ವೇಗವಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಈಗಾಗಲೇ ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿರುವ ರುದ್ರಶಿವ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಾಂಗವಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು, ಅದರ ಬಗೆಗಿನ ಒಂದಷ್ಟು ಕುತೂಹಲಕರ ವಿವರಗಳನ್ನು ಹಂಚಿಕೊಂಡಿದೆ.
ರುದ್ರಶಿವ ಯೋಜನೆಯಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಏಳು ದಿನಗಳ ಚಿತ್ರೀಕರಣ ಮುಗಿಸಿಕೊಂಡು, ಚನ್ನಗಿರಿಯಶಾಂತಿಸಾಗರದ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಅಲ್ಲಿನ ಪೌರಾಣಿಕ, ಐತಿಹಾಸಿಕ ಸ್ಥಳಗಳಲ್ಲಿ ಸಾಂಗವಾಗಿ ಚಿತ್ರೀಕರಣ ನೆರವೇರಿದೆ. ಅಂದಹಾಗೆ, ಚನ್ನಗಿರಿಯ ಶಾಂತಿಸಾಗರ ಸೂಳೆಕೆರೆ ಅಂತಲೂ ಕರೆಸಿಕೊಳ್ಳುತ್ತದೆ. ಏಷ್ಯಾ ಖಂಡದಲ್ಲಿಯೇ ಎರಡನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಯೂ ಶಾಂತಿಸಾಗರಕ್ಕಿದೆ. ಈ ಕೆರೆಗೂ ಹನ್ನೆರಡನೇ ಶತಮಾನಕ್ಕೂ ಎಂದಿಗೂ ಸಡಿಲವಾಗದಂಥಾ ಕೊಂಡಿಗಳಿದ್ದಾವೆ. ಸ್ವರ್ಗಾವತಿ ಪಟ್ಟಣದ ದೊರೆ ವಿಕ್ರಮರಾಜನ ಸುಪುತ್ರಿ ಶಾಂತವ್ವ ತನಗಾದ ಅವಮಾನಕ್ಕೆ ಪ್ರತಿಭಟನೆಯ ಸ್ವರೂಪದಲ್ಲಿ ಈ ಬೃಹತ್ ಕೆರೆಯನ್ನು ಸೃಷ್ಟಿಸಿದಳೆಂಬ ಪ್ರತೀತಿ ಇದೆ.
“ನಾನು ಬಿಗ್ ಬಾಸ್’ಗೆ ಹೋಗೋಕೆ ಕಾರಣ ಅವರು”- ಕಡೆಗೂ ‘ಆ’ ವ್ಯಕ್ತಿ ಯಾರೆಂದು ಸತ್ಯ ಬಾಯ್ಬಿಟ್ಟ ಸಂಗೀತ
ಇಲ್ಲಿಯೇ ಸರ್ ಎಂ ವಿಶ್ವೇಶ್ವರಯ್ಯ ಕಟ್ಟಿಸಿರುವ ಸೇತುವೆಯೊಂದು ಪ್ರಧಾನ ಆಕರ್ಷಣೆ. ಎರಡು ಬೆಟ್ಟಗಳನ್ನು ಸೇರಿಸಿ ಈ ಸೇತುವೆಯನ್ನು ಕಟ್ಟಿಸಲಾಗಿದೆ. ಈವತ್ತಿಗೂ ಅಚ್ಚರಿಯಾಗಿ ಕಾಣಿಸುವ ಈ ಸೇತುವೆಯ ಮೇಲೆ ಶಭ್ಬಾಷ್ ಚಿತ್ರೀಕರಣ ನಡೆಸಲಾಗಿದೆ. ಅಷ್ಟಕ್ಕೂ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಆ ಸೇತುವೆ ಮೇಲೆ ಚಿತ್ರೀಕರಣ ನಡೆಸುವುದೊಂದು ಸಾಹಸ. ಕೆಲವೇ ಕೆಲ ಕಲಾವಿದರು, ತಂತ್ರಜ್ಞರು ಮಾತ್ರವೇ ಅಲ್ಲಿಗೆ ತಲುಪಲು ಸಾಧ್ಯವಾಗಿತ್ತು. ಇದು ನಿರ್ದೇಶಕ ರುದ್ರಶಿವ ಸೇರಿದಂತೆ ಒಂದಿಡೀ ಚಿತ್ರತಂಡದ ಪಾಲಿಗೆ ಅಮೋಘ ಅನುಭವವನ್ನು ತುಂಬಿದೆ. ಛಾಯಾಗ್ರಾಹಕರು, ಕಲಾವಿದರು, ತಾಂತ್ರಿಕ ವರ್ಗ ದಣಿವು ಮರೆತು ಈ ಚಿತ್ರೀಕರಣದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ.
ಇದಲ್ಲದೇ ಈ ಭಾಗದಲ್ಲಿರುವ ಪ್ರಸಿದ್ಧ ದೇವಾಲಯ, ಹಳ್ಳಿಗಳಲ್ಲಿ ನಾಯಕ ನಾಯಕಿಯ ಪೋಷನ್ನಿನ ಚಿತ್ರೀಕರಣ ನಡೆಸಲಾಗಿದೆ. ಇಂಥಾದ್ದೊಂದು ಸುಂದರ ವಾತಾವರಣದಲ್ಲಿ ಅಚ್ಚುಕಟ್ಟಾಗಿ ಮೊದಲನೇ ಹಂತದ ಚಿತ್ರೀಕರಣವನ್ನು ಮುಗಿಸಿಕೊಳ್ಳಲಾಗಿದೆ. ಶಭ್ಬಾಷ್ ಆಕ್ಷನ್ ಡ್ರಾಮಾ ಜಾನರಿನ ಸಿನಿಮಾ. ಓಂ ಸಾಯಿ ಪ್ರಕಾಶ್ ಸೇರಿದಂತೆ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ರುದ್ರಶಿವ ನಿರ್ದೇಶನದ ಮೊದಲ ಚಿತ್ರವಿದು. ಪವೀಂದ್ರ ಮುತ್ತಪ್ಪ ಈ ಚಿತ್ರವನ್ನು ಏಸ್ 22 (ACE 22) ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಈಗಾಗಲೇ `ಕ’ ಮತ್ತು ಮಳೆಬಿಲ್ಲು ಸಿನಿಮಾಗಳಲ್ಲಿ ನಟಿಸಿರುವ ಶರತ್ ನಾಯಕನಾಗಿ ನಟಿಸಿದ್ದರೆ, ನಿಸರ್ಗ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇದೀಗ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು, ಅದಾಗಲೇ ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಆ ಬಗೆಗಿನ ಒಂದಷ್ಟು ವಿವರಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ.