ಧುಮ್ಮುಕ್ಕಿದ ಚಿತ್ರಾವತಿ ಜಲಾಶಯ, ಜನರಲ್ಲಿ ಸಂತಸ
1 min readಧುಮ್ಮುಕ್ಕಿದ ಚಿತ್ರಾವತಿ ಜಲಾಶಯ, ಜನರಲ್ಲಿ ಸಂತಸ
ಬಾಗೇಪಲ್ಲಿ ಪುರಸಭೆೆಯಿಂದ ಬಾಗಿನ ಅರ್ಪಿಸಲು ಸಿದ್ಧತೆ
ಗುಡಿಬಂಡೆ, ಬಾಗೇಪಲ್ಲಿ ಪಟ್ಟಣಗಳಿಗೆ ತೀರಿದ ನೀರಿನ ಸಮಸ್ಯೆ
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ `ಭರ್ಜರಿ ಮಳೆಗೆ ಬಾಗೇಪಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಚಿತ್ರಾವತಿ ಜಲಾಶಯ ತುಂಬಿ ಹರಿಯುತ್ತಿದ್ದು, ಪಟ್ಟಣ ಮತ್ತು ಸುತ್ತಮುತ್ತಲಿನ ಜನತೆಯಲ್ಲಿ ಸಂತಸ ಮೂಡಿದೆ.
ಬಾಗೇಪಲ್ಲಿ ತಾಲೂಕಿನ ಪರಗೋಡು ಸಮೀಪದಲ್ಲಿರುವ ಚಿತ್ರಾವತಿ ಜಲಾಶಯ ಕಳೆದ ವರ್ಷ ಮಳೆ ಕೊರತೆಯಿಂದ ತುಂಬಿರಲಿಲ್ಲ. ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೆಶದಿಂದ ನಿರ್ಮಾಣ ಮಾಡಿರುವ ಚಿತ್ರಾವತಿ ಜಲಾಶಯ ತುಂಬಿದರೆ 0.7 ಟಿಎಂಸಿ ನೀರು ಶೇಖರಣೆಯಾಗುವ ಪ್ರಾರಂಭದ ಉದ್ದೆಶವಿತ್ತಾದರೂ ಹೂಳು ತುಂಬಿಕೊ0ಡಿರುವ ಕಾರಣ ನೀರು ಶೇಖರಣೆ ಪ್ರಮಾಣ ಕಡಿಮೆಯಾಗಿದೆ.
ತಾಲೂಕಿನ ಬಹುತೇಕ ಎಲ್ಲೆಡೆ ಮತ್ತು ಚಿತ್ರಾವತಿ ಜಲಾನಯನ ಪ್ರದೇಶದಲ್ಲಿ ಸುರಿದ ಭರ್ಜರಿ ಮಳೆಯಿಂದಾಗಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿ ತುಂಬಿ ಹರಿಯುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ಚಿತ್ರಾವತಿ ಜಲಾಶಯ ವೀಕ್ಷಿಸಲು ತಂಡೋಪ ತಂಡವಾಗಿ ನಾಗರೀಕರು ಹೋಗುತ್ತಿದ್ದಾರೆ. ಮತ್ತೊಂದೆಡೆ ಬಾಗೇಪಲ್ಲಿ ಪಟ್ಟಣ ಮತ್ತು ಸುತ್ತಮುತ್ತಲಿನ ಜನತೆಯ ಮುಖದಲ್ಲಿ ಹರ್ಷದ ಹೊನಲು ಹರಿಯು ತ್ತಿದೆ. ಒಮ್ಮೆ ಚಿತ್ರಾವತಿಜಲಾಶಯ ತುಂಬಿ ಹರಿದರೆ ಕನಿಷ್ಠ ೨ ವರ್ಷದವರೆಗೆ ಬಾಗೇಪಲ್ಲಿ ಪಟ್ಟಣದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ ಎಂಬುದು ಇದಕ್ಕೆ ಕಾರಣ.
ಸೋಮವಾರ ರಾತ್ರಿ ಸುರಿದ ಮಳೆ ಬಾಗೇಪಲ್ಲಿ ಕಸಬಾ 20.2 ಮಿಮೀ, ಗೂಳೂರು 50 ಮಿಮೀ, ಚೇಳೂರು ೪೮ ಮಿಮೀ, ಮಿಟ್ಟೇಮರಿ 23 ಮಿಮೀ ಮತ್ತು ಪಾತಪಾಳ್ಯ 26.3 ಮಿಮೀ ದಾಖಲಾದ ಬಗ್ಗೆ ವರದಿಯಾಗಿದೆ. ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮಾತನಾಡಿ, ಬಾಗೇಪಲ್ಲಿ ಮತ್ತು ಗುಡಿಬಂಡೆ ಪಟ್ಟಣಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಪರಗೋಡು ಚಿತ್ರಾವತಿ ಜಲಾಶಯ ಮತ್ತು ಗುಡುಬಂಡೆ ಸಮೀಪದ ಅಮಾನಿಭೆರಸಾಗರ ಕೆರೆಗಳು ಒಂದೇ ದಿನ ತುಂಬಿ ಹರಿದಿರುವುದು ಹರ್ಷತಂದಿದೆ. ಇದರಿಂದ ಎರಡು ಪ್ರಮುಖ ಪಟ್ಟಣಗಳಿಗೆ ನೀರಿನ ಸಮಸ್ಯೆ ನೀಗುವುದಲ್ಲದೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ನೀರಿನ ಸಮಸ್ಯೆ ನೀಗಿಸಲಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಚಿತ್ರಾವತಿ ಜಲಾಶಯ ತುಂಬಿ ಹರಿದಿದ್ದು ಸಂತಸ ತಂದಿದೆ. ಪ್ರಮುಖವಾಗಿ ಬಾಗೇಪಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. `ಭರ್ತಿಯಾಗಿರುವುದರಿಂದಾಗಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಶುಕ್ರವಾರ ಪುರಸಭೆಯಿಂದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಗುತ್ತದೆ ಎಂದು ತಿಳಿಸಿದರು.