ಆಪರೇಷನ್ ಕಮಲವೆಂಬ ಗುಮ್ಮದ ಹಿಂದಿನ ಅಸಲಿಯತ್ತು ಡಿಕೆಶಿ v/s ಸಿದ್ದರಾಮಯ್ಯ ನಡುವಿನ ಸಿಎಂ ಪಟ್ಟದ ಸಂಘರ್ಷ!
1 min readಆಪರೇಷನ್ ಕಮಲದ ಪ್ರಯತ್ನಗಳು ನಿಜವಾಗಿಯೂ ನಡೆಯುತ್ತಿವೆಯೇ, ಅಥವಾ ಕಾಂಗ್ರೆಸ್ ಶಾಸಕರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಾಡುತ್ತಿರುವ ಈ ಆರೋಪ ಸತ್ಯಕ್ಕೆ ದೂರವಾದುದೇ?, ಆಪರೇಷನ್ ಕಮಲ ಆಗುತ್ತಿದೆ ಎಂದು ಹೇಳಿದರೆ, ಸಿಗುವ ಲಾಭಗಳೇನು? ಡಿಕೆಶಿ ಹಾಗೂ ಡಿಕೆಶಿ ಆಪ್ತ ಬಳಗದವರೇ ಯಾಕೆ ಈ ಆರೋಪಗಳನ್ನು ಮಾಡುತ್ತಿದ್ದಾರೆ ಈ ಎಲ್ಲಾ ಕುತೂಹಲದ ಅಂಶಗಳು ತೆರೆದುಕೊಳ್ಳೋದಂತೂ ನಿಜ…
ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸುದ್ದಿ ಕೇಂದ್ರಕ್ಕೆ ಬಂದಿದೆ. ಅದರಲ್ಲೂ ಕಾಂಗ್ರೆಸ್ ಶಾಸಕ ಗಣಿಗ ರವಿ ಮಾಡಿರುವ ಗಂಭೀರ ಆರೋಪ. 50 ಮಂದಿ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡಿರುವ ವ್ಯಕ್ತಿಯೊಬ್ಬರು ನನಗೂ ಆಪರೇಷನ್ ಆಫರ್ ನೀಡಿದ್ದಾರೆ ಎಂಬ ಬಾಂಬ್ ಸಿಡಿಸಿದ್ದರು.
ಸಮ್ಮಿಶ್ರ ಸರ್ಕಾರ ಪತನದ ಕೆಲವು ರುವಾರಿಗಳೇ ಈ ಆಪರೇಷನ್‌ನಲ್ಲಿ ಇದ್ದಾರೆ ಎಂದೂ ಉಲ್ಲೇಖಿಸಿದ್ದರು. ಈ ಮೂಲಕ ರಾಜ್ಯದಲ್ಲಿ ಸರ್ಕಾರ ಪತನದ ಗಂಭೀರ ಪ್ರಯತ್ನಗಳು ನಡೆಯುತ್ತಿವೆ ಎಂದೂ ಹೇಳಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಶಾಸಕ ಗಣಿಗ ರವಿ ಈ ಆರೋಪದ ಬೆನ್ನಲ್ಲೇ ಆಪರೇಷನ್ ಕಮಲದ ಅಸಲಿಯತ್ತಿನ ಬಗ್ಗೆ ಬೇರೆ ಬೇರೆ ಆಯಾಮದಲ್ಲೂ ಚರ್ಚೆಗಳು ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿದೆ.