ಧಾರಾಕಾರ ಮಳೆಗೆ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತ
1 min readಧಾರಾಕಾರ ಮಳೆಗೆ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತ
ತುಂಬಿ ಹರಿಯುತ್ತಿರುವ ಕೆರೆ, ಕುಂಟೆಗಳು, ಮನೆಗಳಿಗೆ ನುಗ್ಗಿದ ನೀರು
ರಸ್ತೆಗಳೂ ಜಲಾವೃತ, ವಾಹನ ಸಂಚಾರಕ್ಕೂ ತೊಂದರೆ
ಎಲ್ಲೆಲ್ಲೂ ನೀರು, ಮುನ್ನೆಚ್ಚರಿಕೆಯತ್ತ ಗಮನ ಹರಿಸಬೇಕಾದ ಜಿಲ್ಲಾಡಳಿತ
ಬರಬೇಕಾದ ಸಮಯದಲ್ಲಿ ಮರೆಯಾಗಿದ್ದ ವರುಣ ಇದೀಗ ಕುಂಭದ್ರೋಣವಾಗಿ ಸುರಿಯುತ್ತಿದ್ದಾನೆ. ಸತತ ಮಳೆಯ ಪರಿಣಾಮ ತೋಟಗಾರಿಕಾ ಬೆಳೆಗಳು ಸಂಪೂರ್ಣ ನಾಶವಾಗಿ ರೈತರು ತೊಂದರೆ ಸಿಲುತಿದ್ದರೆ, ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರಗಳನ್ನೇ ಸೃಷ್ಟಿ ಮಾಡಿದೆ. ಇನ್ನು ಕೆರೆ ಕುಂಟೆಗಳು ತುಂಬಿ ಹರಿಯುತ್ತಿದ್ದು, ರೈತರಲ್ಲಿ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ.
ಇಲ್ಲಿ ನೋಡಿ, ಇದು ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರದಿ0ದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಮಾರ್ಗ. ಈ ಮಾರ್ಗ ಸದಾ ವಾಹಣ ದಟ್ಟಣೆಯಿಂದ ಕೂಡಿದ್ದು, ಇಂತಹ ವಾಹನ ನಿಬಿಡ ರಸ್ತೆಯಲ್ಲಿ ನೀರು ಯಾವ ಮಟ್ಟಕ್ಕೆ ಹರಿಯುತ್ತಿದೆ ಎಂಬುದನ್ನು ಗಮನಿಸಿ. ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಶಿಡ್ಲಘಟ್ಟ ರಸ್ತೆ ಸಂಪೂರ್ಣ ಜಲಾವೃತವಾಗಿ ವಾಹನ ಸಂಚಾರಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣಲವಾಗಿತ್ತು.
ಇನ್ನು ಇಂದು ಇಡೀ ದಿನ ಸತತವಾಗಿ ಸುರಿದ ಮಳೆಯಿಂದಾಗಿ ನಗರದಲ್ಲಿಯೂ ಜನಜೀವನ ಅಸ್ತವ್ಯಸ್ತವಾಗಿತ್ತು. ಬೈಕ್ ಸೇರಿದಂತೆ ಇತರೆ ವಾಹನಗಳಲ್ಲಿ ರಸ್ತೆಗೆ ಇಳಿಯಲು ಮಳೆ ಸುರಿಯುತ್ತಿದ್ದ ಕಾರಣ ಶಾಲೆ, ಕಚೇರಿಗಳಿಗೆ ತೆರಳಲು ಜನರು ತೀವ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಮಾರ್ಗ ಮಮಾತ್ರವಲ್ಲದೆ, ಮಂಚನಬಲೆ ಗ್ರಾಮಕ್ಕೆ ಹೋಗುವ ಮಾರ್ಗದ ರಾಷ್ಟಿಯ ಹೆದ್ದಾರಿ ಸೇಕತುವೆ ಬಳಿಯೂ ನೀರು ತುಂಬಿ ವಾಹನ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ಚಿಕ್ಕಬಳ್ಳಾಪುರಕ್ಕೆ ಜೀವ ಜಲ ಪೂರೈಸುತ್ತಿರುವ ಜಕ್ಕಲಮಡಗು ಜಲಾಶಯ ತುಂಬಿ ಹರಿಯುತ್ತಿದೆ. ಅಲ್ಲದೆ ಗುಡಿಬಂಡೆಯಯ ಅಮಾನಿ ಬೈರಸಾಗರ ಕೆರೆಯೂ ರಾತ್ರಿಯಿಂದ ಕೋಡಿ ಹರಿಯುತ್ತಿದೆ. ಸತತವಾಗಿ ಮಳೆಯಾಗುತ್ತಿರುವ ಕಾರಣ ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಕೋಡಿ ಹರಿಯುತ್ತಿದ್ದು, ಕೆರೆ ಏರಿಯ ಮೇಲೆ ವಾಹನ ಸಂಚಾರಕ್ಕೆ ಪ್ರಸ್ತುತ ಯಾವುದೇ ಸಮಸ್ಯೆ ಇಲ್ಲವಾದರೂ ಕೋಡಿ ಹರಿಯುವ ರಬಸ ಹೆಚ್ಚಾದರೆ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ.
ಗುಡಿಬ0ಡೆ ಪಟ್ಟಣದ ವಿನಾಯಕನಗರದ ಮನೆಗಳಿಗೆ ಸೋಮವಾರ ರಾತ್ರಿ ಮಳೆ ನೀರು ನುಗ್ಗಿ ತೀವ್ರ ಅವಾಂತರ ಸೃಷ್ಟಿಸಿದೆ. ತ್ಯಾಜ್ಯ ನೀರು ಸೇರಿದಂತೆ ಮಳೆ ನೀರು ಏಕಾಏಕಿ ಮನೆಗಳಿಗೆ ನುಗ್ಗಿದ್ದು, ಮನೆಯಲ್ಲಿದ್ದ ದಿನಬಳಕೆ ವಸ್ತುಗಳು ಸೇರಿದಂತೆ ಎಲ್ಲವೂ ಜಲಮಯವಾಗಿವೆ. ಇಡೀ ರಾತ್ರಿ ಮಳೆ ನೀರು ಹೊರಹಾಕುವುದರಲ್ಲಿಯೇ ಜನರು ನಿರತರಾಗಿದ್ದು, ಜಾಗರಣೆ ಮಾಡುವಂತಾಗಿದೆ. ಸತತವಾಗಿ ಮನವಿ ಮಾಡಿದರೂ ಗಮನ ಹರಿಸಲ ಪಟ್ಟಣ ಪಂಚಾಯಿತಿಗೆ ಸ್ಥಳೀಯ ನಿವಾಸಿಗಳು ರಾತ್ರಿ ಇಡೀ ಶಾಪ ಹಾಕುವುದರಲ್ಲಿಯೇ ಕಾಲ ಕಳೆಯುವಂತಾಗಿದೆ.
ಗುಡಿಬ0ಡೆಯ ವಿನಾಯಕ ನಗರಕ್ಕೆ ಸಮೀಪದಲ್ಲಿಯೇ ರಾಜಕಾಲುವೆ ಇದ್ದು, ಈ ರಾಜಕಾಲುವೆಗೆ ನಿರ್ಮಿಸಿರುವ ಮೋರಿ ತೀರಾ ಕೆಳ ಹಂತದಲ್ಲಿ ನಿರ್ಮಿಸಿರುವ ಕಾರಣ ಮಳೆಯಾಗುತ್ತಿದ್ದಂತೆ ತ್ಯಾಜ್ಯ ನೀರಿನ ಜೊತೆಗೆ ಮಳೆ ನೀರು ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ. ಕಳೆದ ಒಂದು ದಶಕ್ಕೂ ಹೆಚ್ಚು ಕಾಲದಿಂದ ವಿನಾಯಕ ನಗರದ ಜನರು ಈ ಸಮಸ್ಯೆ ಎದುರಿಸುತ್ತಿದ್ದು, ಈ ಮೋರಿ ಎತ್ತರ ನಿರ್ಮಿಸುವ ಮೂಲಕ ಈ ಭಾಗದ ಜನರು ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಕಳೆದ ಹತ್ತು ವರ್ಷಗಳಿಂದ ಪಟ್ಟಣ ಪಂಚಾಯಿತಿಗೆ ಮೊರೆ ಇಡುತ್ತಿದ್ದರೂ ಸಂಬ0ಧಿಸಿದ ಅಧಿಕಾರಿಗಳು ಗಮನವೇ ಹರಿಸಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಪಟ್ಟಣ ಪಂಚಾಯಿತಿಗೆ ಎಷ್ಟೇ ಅನುದಾನ ಬಂದರೂ ಮೋರಿ ಎತ್ತರ ಮಾಡುವ ಕೆಲಸಕ್ಕೆ ಮಾತ್ರ ಮುಂದಾಗಿಲ್ಲ. ಪ್ರತಿ ಬಾರಿ ಮಳೆ ಬಂದಾಗಲೂ ಮನೆಗಳಿಗೆ ನೀರು ನುಗ್ಗಿ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ ಮುಂದುವರಿದಿದೆ. ಹತ್ತು ವರ್ಷಗಳಿಂದ ಒಂದು ಮೋರಿ ದುರಸ್ತಿ ಮಾಡಲಾಗದ ಪಟ್ಟಣ ಪಂಚಾಯಿತಿ ಇರುವುದು ಜನರ ಹಿತಕ್ಕೋ ಇಲ್ಲವೇ ಜನರಿಗೆ ಸಂಕಷ್ಟ ನೀಡುವುದಕ್ಕೋ ಎಂದು ಸಂತ್ರಸ್ಥರು ಕಿಡಿ ಕಾರಿದ್ದಾರೆ.
ಒಟ್ಟಿನಲ್ಲಿ ಸತತ ಮಳೆಯಿಂದ ರೈತರಿಗೆ ಬೆಳೆ ನಾಶ, ತಗ್ಗು ಪ್ರದೇಶದ ಜನರಿಗೆ ಮನೆಗಳಿಗೆ ನೀರು ನುಗ್ಗುವುದು, ರಸ್ತೆ ಸಂಚಾರಕ್ಕೂ ಸಮಸ್ಸೆ ಎದುರಾಗಿದ್ದು, ಈ ಮಳೆ ಇನ್ನೂ ಮುಂದುವರಿದಲ್ಲಿ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುವ ಆತಂಕ ಇದ್ದು, ಮುಂದೆ ಎದುರಾಗಬಹುದಾದ ಮಳೆ ಅವಾಂತರಗಳಿಗೆ ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಸಜ್ಜಾಗಬೇಕಾದ ಅಗತ್ಯವಿದೆ ಎಂದರೆ ತಪ್ಪಾಗಲಾರದು.