ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಕೋಡಿ ಹರಿದ ಕೆರೆ
1 min readಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಕೋಡಿ ಹರಿದ ಕೆರೆ
ಸಂಪೂರ್ಣ ತುಂಬಿ ಕೋಡಿ ಹೊಡೆದ ದಂಡಿಗಾನಹಳ್ಳಿ ಕೆರೆ
ಕೆರೆ ಕೋಡಿ ಹರಿದ ಕಾರಣ ರಾಜಕಾಲುವೆ ಉಕ್ಕಿ ಮಳೆಯ ನೀರು ತೋಟಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಕಾಲುವೆ ಪಕ್ಕದ ನೂರಾರು ಎಕರೆ ತೋಟಗಳು ಜಲಾವೃತವಾಗಿದ್ದು, ಬೆಳೆ ನಾಶವಾಗಿದೆ.
ಕೆರೆ ಕೋಡಿ ಹರಿಯುತ್ತಿರುವ ನೀರು ರಾಜಕಾಲುವೆಯಿಂದ ಉಕ್ಕಿ ತೋಟಗಳಿಗೆ ಹರಿದ ಪರಿಣಾಮ ವಿವಿಧ ಬೆಳೆಗಳು ಮುಳುಗಡೆಯಾಗಿವೆ. ವೇಗವಾಗಿ ಹರಿಯುತ್ತಿರುವ ಕೆರೆಯ ನೀರಿನಲ್ಲಿ ಮೀನು ಹಿಡಿಯಲು ಜನರು ಮುಂದಾಗಿದ್ದಾರೆ. ಬಲೆ ಹಾಕಿ ಹರಿಯುತ್ತಿರುವ ನೀರಿನಲ್ಲಿ ಮೀನು ಹಿಡಿಯುತ್ತಿದ್ದಾರೆ. ವಿಜಯಪುರ ಪುರಸಭೆ ಮತ್ತು ಪೊಲೀಸ್ ಇಲಾಖೆಯಿಂದ ಕೆರೆ ಕೋಡಿ ಬಳಿ ಇರುವ ಮನೆಗಳ ಜನರನ್ನು ಮತ್ತು ಸಾಕು ಪ್ರಾಣಿಗಳನ್ನು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
ಕೆರೆ ತುಂಬಿದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ವಿಜಯಪುರ ಅಮಾನಿ ಕೆರೆ ಕೋಡಿ ಹೊಡೆದ್ರೆ ಕೋಡಿ ಪಕ್ಕದ ಮನೆಗಳು ಜಲಾವೃತವಾಗಲಿವೆ. ಸುಮಾರು 25 ಕ್ಕೂ ಅಧಿಕ ಮನೆಗಳಲ್ಲಿ ವಾಸಿಸುತ್ತಿರುವ ಜನರು ಮತ್ತು ಅವರು ಸಾಕಿರುವ ಪ್ರಾಣಿಗಳ ಸಮೇತ ತೆರವುಗೊಳಿಸಲಾಗುತ್ತಿದೆ. ಕಳೆದ 2 ವರ್ಷದಿಂದ ಪ್ರವಾಹದ ರೀತಿ ಮನೆಗಳ ಬಳಿ ಹರಿದಿದ್ದ ಕೆರೆ ಕೋಡಿ ನೀರು ಜನರಲ್ಲಿ ಆತಂಕ ಮೂಡಿಸಿತ್ತು. ಹಾಗಾಗಿ ಈ ಬಾರಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.
ಮನೆ ಖಾಲಿ ಮಾಡಿಸುತ್ತಿರುವುದಕ್ಕೆ ಸ್ಥಳಿಯರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಥಳೀಯ ನಿವಾಸಿ ಮಮತಾ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು `ಭರವಸೆ ನೀಡುತ್ತಾರೆ, ಕಳೆದ ಬಾರಿ ನಿವೇಶನ ನೀಡುವುದಾಗಿ ಹೇಳಿ ಹೋದವರು ಈವರೆಗೂ ಪತ್ತೆ ಇಲ್ಲ, ಪದೇ ಪದೇ ಮೋಸ ಮಾಡುತ್ತಾರೆ. ಚುನಾವಣೆ ವೇಳೆ ಮತ ನೀಡಿ ಎಲ್ಲವೂ ನೀಡುವುದಾಗಿ ಸುಳ್ಳು ಹೇಳುತ್ತಾರೆ ಎಂದು ಆರೋಪಿಸಿದರು.
ಕಳೆದ 25 ವರ್ಷಗಳಿಂದ ವಾಸಿಸುತ್ತಿದ್ದರೂ ನಿವೇಶನ ಕೊಟ್ಟಿಲ್ಲ, ಮನೆ ಕೊಟ್ಟಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು, ಸ್ಥಳೀಯ ನಿವಾಸಿ ಮಂಜುಳಾ ಮಾತನಾಡಿ, ಏಕಾಏಕಿ ಮನೆ ಖಾಲಿ ಮಾಡಿಸಿದ್ರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ಕಂದಾಯ ನಿರೀಕ್ಷಕ ತ್ಯಾಗರಾಜ್ ಮಾತನಾಡಿ, ಕಳೆದು ಎರಡು ವರ್ಷಗಳ ಹಿಂದೆ ಕೆರೆ ಕೊಡಿ ಹೋಗಿ ನೀರು ರಭಸದಿಂದ ಮನೆಗಳು ಮತ್ತು ಮನೆಯಲ್ಲಿದ್ದ ವಸ್ತುಗಳು ನಾಶವಾಗಿದ್ದವು. ಈಗ ಮುನ್ನೆಚ್ಚರಿಕೆ ಕ್ರಮವಾಗಿ ಮನೆಗಳನ್ನು ಮತ್ತು ದನಕರುಗಳನ್ನು ಖಾಲಿ ಮಾಡಿಸುತ್ತೇವೆ, ಹೆಚ್ಚಿನ ಮಳೆಯಾದರೆ ಪ್ರವಾಹದ ರೀತಿ ನೀರು ಹರಿಯುವುದರಿಂದ ಈ ಕ್ರಮ ತೆಗೆದುಕೊಳ್ಳುತ್ತಿದೇವೆ ಎಂದರು.