ವಿಚ್ಚೇಧಿತ ಪತ್ನಿಯನ್ನು ಬರ್ಭರವಾಗಿ ಕೊಲೆಗೈದ ಪತಿ
1 min readವಿಚ್ಚೇಧಿತ ಪತ್ನಿಯನ್ನು ಬರ್ಭರವಾಗಿ ಕೊಲೆಗೈದ ಪತಿ
ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣು
ಶಿಡ್ಲಘಟ್ಟ ತಾಲೂಕಿನ ಸೊಣ್ಣೇನಹಳ್ಳಿಯಲ್ಲಿ ಘಟನೆ
ಸಂಸಾರದಲ್ಲಿ ನಡೆದ ಸಣ್ಣ ಗಲಾಟೆ, ಜಗಳದಿಂದ ವಿಚ್ಚೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿ. ಆದರೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯನ್ನು ಬರ್ಭರವಾಗಿ ವಿಚ್ಛೇದಿತ ಪತಿಯೇ ಬರ್ಭರವಾಗಿ ಕೊಲೆ ಮಾಡಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಸೊಣ್ಣೇನಹಳ್ಳಿ ಗ್ರಾಮದಲ್ಲಿ ಇಂದು ಬೆಳ್ಳಂಬೆಳಿಗ್ಗೆ ನಡೆದಿದ್ದು, ಇಡೀ ಗ್ರಾಮಸ್ಥರು ಕೊಲೆ ವಿಚಾರ ತಿಳಿದು ಬೆಚ್ಚಿ ಬಿದ್ದಿದ್ದಾರೆ.
ಹೌದು, ಆ ಗ್ರಾಮದ ಜನತೆ ಇನ್ನೂ ನಿದ್ದೆಯಿಂದ ಏಳುವ ಮೊದಲೇ ಅಲ್ಲಿ ಹೆಣ ಬಿದ್ದಿತ್ತು. ಈ ವಿಚಾರ ತಿಳಿದ ಗ್ರಾಮಸ್ಥರು ಒಮ್ಮೆಯೇ ಬೆಚ್ಚಿ ಬಿದ್ದಿದ್ದರು. ಹಾಗೆ ಕೊಲೆಯಾದ ಗೃಹಿಣಿಯನ್ನು ಆಕೆಯ ವಿಚ್ಛೇದಿತ ಪತಿಯೇ ಹತ್ಯೆ ಮಾಡಿರುವ ವಿಚಾರ ತಿಳಿದು ಗ್ರಾಮಸ್ಥರು ಮತ್ತಷ್ಟು ಆತಂಕ್ಕೆ ಒಳಗಾಗಿದ್ದಾರೆ. ಆಕೆಯ ಪತಿ ಮತ್ತು ಆತನ ಮತ್ತೊಬ್ಬ ಪತ್ನಿಯ ಪುತ್ರ ಸೇರಿ ಕೊಚ್ಚಿ ಕೊಲೆ ಮಾಡಲಾಗಿದೆ.
45 ವರ್ಷದ ಪದ್ಮಮ್ಮ ಕೊಲೆಯಾದ ದುರ್ದೈವಿಯಾಗಿದ್ದು, ಮೃತಳ ಪತಿ 58 ವರ್ಷದ ಮುನಿರೆಡ್ಡಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕೊಲೆ ಮಾಡಿದ ನಂತರ ಮುನಿರೆಡ್ಡಿ ಸ್ವತಃ ಪೊಲೀಸರಿಗೆ ಶರಣಾಗಿದ್ದರೆ, ಕೊಲೆಯಲ್ಲಿ ಭಾಗಿಯಾದ ಮುನಿರೆಡ್ಡಿಯ ಮತ್ತೊಬ್ಬ ಪತ್ನಿಯ ಪುತ್ರ 20 ವರ್ಷದ ಗಿರೀಶ್ ತಲೆ ಮರೆಸಿಕೊಂಡಿದ್ದಾನೆ.
ಶಿಡ್ಲಘಟ್ಟ ತಾಲೂಕಿನ ಸೊಣ್ಣೇನಹಳ್ಳಿ ಗ್ರಾಮದ ಮುನಿರೆಡ್ಡಿ ಮತ್ತು ಪದ್ಮಮ್ಮಳ ನಡುವೆ ಸಂಸಾರದಲ್ಲಿ ಗಲಾಟೆ ನಡೆದಿದ್ದು, ಈ ಸಣ್ಣ ಜಗಳದಿಂದ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪದ್ಮಮ್ಮಳಿಗೆ ಇಬ್ಬರು ಪುತ್ರರಿದ್ದು, ಇಬ್ಬರೂ ಪ್ರತ್ಯೇಕ ಅಪಘಾತಗಳಲ್ಲಿ ಈಗಾಗಲೆ ಮೃತಪಟ್ಟಿದ್ದಾರೆ. ಇದರಿಂದ ಪದ್ಮಮ್ಮ ಒಬ್ಬಂಟಿಯಾಗಿ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದಳು.
ಈ ಕಡೆ ಮುನಿರೆಡ್ಡಿ ಪದ್ಮಮ್ಮಳಿಂದ ವಿಚ್ಚೇಧನ ಪಡೆದು ಮತ್ತೊಂದು ಮದುವೆಯಾಗಿದ್ದಾನೆ. ಎರಡನೇ ಪತ್ನಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇದೆ. ಈ ಮಧ್ಯೆ ಪದ್ಮಮ್ಮಳಿಗೆ ಜೀವನಾಂಶಕ್ಕಾಗಿ ನೀಡಿದ ಜಮೀನು ವಾಪಸ್ ನೀಡುವಂತೆ ಮುನಿರೆಡ್ಡಿ ತಗಾದೆ ತೆಗೆದಿದ್ದಾನೆ ಎನ್ನಲಾಗಿದೆ. ನಿನಗೆ ಮಕ್ಕಳಿಲ್ಲವಲ್ಲ ಜಮೀನು ಇಟ್ಟುಕೊಂಡು ಏನು ಮಾಡ್ತೀಯಾ ಎಂದು ಜಮೀನು ವಾಪಸ್ ಮಾಡು ಎಂದು ಆಗಾಗ ಪೀಡಿಸುತ್ತಿದ್ದು, ಇದು ಪದ್ಮಮ್ಮ ಮತ್ತು ಮುನಿರೆಡ್ಡಿ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು ಎಂದು ತಿಳಿದು ಬಂದಿದೆ.
ಮುನಿರೆಡ್ಡಿ ಹಾಗೂ ಆತನ ಮಗ ಗಿರೀಶ್ ಬೆಳಗ್ಗೆಯೆ ಪದ್ಮಮ್ಮಳ ಮನೆಗೆ ತೆರಳಿದ್ದು, ಶೌಚ ಕಾರ್ಯ ಮುಗಿಸಿ ಮನೆಯೊಳಗೆ ಬಂದ ಪದ್ಮಮ್ಮಳ ಮೇಲೆ ಏಕಾ ಏಕಿ ಮಚ್ಚಿನಿಂದ ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಪದ್ಮಮ್ಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.
ಘಟನೆ ನಂತರ ಗಿರೀಶ್ ತಲೆ ಮರೆಸಿಕೊಂಡಿದ್ದು, ಮುನಿರೆಡ್ಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ತೆರಳಿ ಸ್ವತಃ ಪೊಲೀಸರಿಗೆ ಶರಣಾಗಿದ್ದಾರೆ. ಅಲ್ಲಿಂದ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ಆರೋಪಿ ಮುನಿರೆಡ್ಡಿಯನ್ನು ಕರೆ ತರಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವೃತ್ತ ನಿರೀಕ್ಷಕ ಎಂ.ಶ್ರೀನಿವಾಸ್, ಗ್ರಾಮಾಂತರ ಠಾಣೆ ಎಸ್‌ಐ ಸತೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲಿಸಿದೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊಲೆ ನಡೆದ ಸೊಣ್ಣೇನಹಳ್ಳಿ ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಎಎಸ್ಪಿ ರಾಜ ಇಮಾಮ್ ಖಾಸಿಂ, ಡಿವೈಎಸ್ಪಿ ಮುರಳೀಧರ್ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ಕ್ರಮಕ್ಕೆ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ.