‘ಕಾಟೇರ’ಮ್ಮನ ಮಹಿಮೆ; ಮೊದಲ ದಿನದ ಅಂದಾಜು ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?
1 min readಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾ ‘ಕಾಟೇರ’ ಅದ್ಧೂರಿಯಾಗಿ ರಿಲೀಸ್ ಆಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗಾಗಿ ಮಿಡ್‌ನೈಟ್ ಶೋ ಹಾಕಲಾಗಿತ್ತು. ಇನ್ನು ಕೆಲವು ಕಡೆ ಬೆಳಗಿನ ಜಾವ 3 ಗಂಟೆಗೆ ಶೋ ಇಡಲಾಗಿತ್ತು. ಕೆಲವೆಡೆ ಮುಂಜಾನೇ 5 ಗಂಟೆಗೇ ‘ಕಾಟೇರ’ ಪ್ರದರ್ಶನ ಕಂಡಿದ್ದೂ ಇದೆ.
ಸಿನಿಮಾ ಬಿಡುಗಡೆಗೂ ಮುನ್ನ ಬೆಂಗಳೂರು, ಮೈಸೂರು, ದಾವಣಗರೆ, ಶಿವಮೊಗ್ಗ ಕಡೆಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಫ್ಯಾನ್ಸ್ ಶೋಗಳಿಂದ ಹಿಡಿದು ಇಂದು ಪ್ರದರ್ಶನಗೊಳ್ಳಬೇಕಿರೋ ಎಲ್ಲಾ ಶೋಗಳು ಕೂಡ ಬಹುತೇಕ ಚಿತ್ರಮಂದಿರಗಳಲ್ಲಿ ಮೊದಲೇ ಬುಕ್ ಆಗಿದೆ. ಹೀಗಾಗಿ ಟ್ರೇಡ್ ಎಕ್ಸ್‌ಪರ್ಟ್‌ಗಳು ‘ಕಾಟೇರ’ ಮೊದಲ ದಿನ ಅಂದಾಜು ಗಳಿಕೆಯನ್ನು ಲೆಕ್ಕ ಹಾಕುತ್ತಿದ್ದಾರೆ.
ಬುಕ್ ಮೈ ಶೋನಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ 24 ಗಂಟೆಗಳ ಅಂತರದಲ್ಲಿ 56 ಸಾವಿರ ಟಿಕೆಟ್‌ಗಳು ಬುಕ್ ಆಗಿದ್ದವು. ಇನ್ನೂ ಅಭಿಮಾನಿಗಳಿಗಾಗಿ ‘ಕಾಟೇರ’ ಸಿನಿಮಾದ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಸುಮಾರು 21 ಥಿಯೇಟರ್‌ಗಳಲ್ಲಿ ಮಧ್ಯರಾತ್ರಿ 12 ಗಂಟೆ ಶೋ ಅನ್ನು ಏರ್ಪಡಿಸಲಾಗಿತ್ತು. ಬೆಳಗಿನ ಜಾವ 3 ಗಂಟೆಗೆ 43 ಶೋಗಳು, 4 ಗಂಟೆ 77 ಶೋಗಳು, 5 ಗಂಟೆಗೆ 89 ಶೋಗಳು ಹಾಗೂ 6 ಗಂಟೆಗೆ 105 ಶೋಗಳನ್ನು ಆಯೋಜನೆ ಮಾಡಲಾಗಿತ್ತು.
ಇನ್ನು ಕರ್ನಾಟಕದಾದ್ಯಂತ ಮೊದಲ ದಿನ 1670 ಶೋಗಳನ್ನು ಪ್ರದರ್ಶನ ಮಾಡಲಾಗಿತ್ತು. 389 ಸಿಂಗಲ್ ಸ್ಕ್ರೀನ್‌ಗಳಲ್ಲಿ ಕಾಟೇರ ಪ್ರದರ್ಶನ ಕಾಣುತ್ತಿದೆ. ಹಾಗೇ 72 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳನ್ನು ‘ಕಾಟೇರ’ಗಾಗಿ ಮೀಸಲಿರಿಸಲಾಗಿದೆ. ಇದರೊಂದಿಗೆ ಇನ್ನೂ ‘ಕಾಟೇರ’ ಸಿನಿಮಾ ನೋಡಲು ಟಿಕೆಟ್ ಖರೀದಿಸುವವರ ಸಂಖ್ಯೆ ಏನೂ ಕಮ್ಮಿಯಾಗಿಲ್ಲ. ಕಳೆದ ಒಂದು ಗಂಟೆಯಲ್ಲಿ ಸುಮಾರು 6 ಸಾವಿರ ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಸೇಲ್ ಆಗಿವೆ.
ಹೀಗಾಗಿ ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ‘ಕಾಟೇರ’ ಸಿನಿಮಾ ಮೊದಲ ದಿನದ ಕಲೆಕ್ಷನ್ ಎಷ್ಟು ಅನ್ನೋ ಅಂದಾಜು ಲೆಕ್ಕಾಚಾರ ಈಗಾಗಲೇ ಸಿಕ್ಕಿದೆ. ಕನ್ನಡ ಚಿತ್ರರಂಗದ ವಿತರಕರ ಪ್ರಕಾರ, ಅಡ್ವಾನ್ಸ್ ಬುಕಿಂಗ್ ಹಾಗೂ ಸ್ಪೆಷಲ್ ಶೋಗಳಿಂದ ‘ಕಾಟೇರ’ ಮೊದಲ ಸಿನಿಮಾ 12 ಕೋಟಿಯಿಂದ 15 ಕೋಟಿ ವರೆಗೂ ಕಲೆಕ್ಷನ್ ಮಾಡಬಹುದು ಎಂದು ಅಂದಾಜು ಹಾಕಿದ್ದಾರೆ.
ಅಂದ್ಹಾಗೆ ಇದೂವರೆಗೂ ಬೆಂಗಳೂರಿನಲ್ಲಿ ಶೇ. 64ರಷ್ಟು ಥಿಯೇಟರ್ ಫುಲ್ ಆಗಿದ್ದರೆ, ತುಮಕೂರಿನಲ್ಲಿ ಶೇ.91ರಷ್ಟು, ಕಲಬುರ್ಗಿ ಶೇ.61, ಹುಬ್ಬಳ್ಳಿ ಶೇ.52, ಮೈಸೂರು ಶೇ. 90ರಷ್ಟು, ಶಿವಮೊಗ್ಗ ಶೇ.78, ಕುಂದಾಪುರ ಶೇ.40ರಷ್ಟು ಥಿಯೇಟರ್‌ಗಳು ಫುಲ್ ಆಗಿವೆ ಎಂದು ಟ್ರೇಡ್ ಪೋರ್ಟಲ್ sacnilk ವರದಿ ಮಾಡಿದೆ. ಇನ್ನೂ ಸಂಜೆಯ ವೇಳೆ ಮತ್ತೆ ಏರಿಕೆ ಆಗುವ ಸಾಧ್ಯತೆಯಿದೆ. ಇನ್ನೂ ‘ಕಾಟೇರ’ ತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಇದು ವಿತರಕರ ವಲಯದಲ್ಲಿ ಆಗುತ್ತಿರೋ ಚರ್ಚೆಯಷ್ಟೇ.