ಅಧಿಕಾರಿಗಳ ಜಾಗೃತಿಯಿಂದ ಪೋಷಕರ ಕೈ ಸೇರಿದ ಬಾಲಕಿ
1 min readಅಧಿಕಾರಿಗಳ ಜಾಗೃತಿಯಿಂದ ಪೋಷಕರ ಕೈ ಸೇರಿದ ಬಾಲಕಿ
ಆಸ್ಪತ್ರೆಯಲ್ಲಿ ತಾಯಿಯಿಂದ ದೂರವಾಗಿದ್ದ ಬಾಲಕಿ
ದಾರಿಹೋಕರು ಬಾಲಕಿಯನ್ನು ಕಂಡು ಸಿಡಿಪಿಒಗೆ ಮಾಹಿತಿ
ತಾಯಿ ಮತ್ತು ಅಜ್ಜಿಯ ಜೊತೆ ಆಸ್ಪತ್ರೆಗೆ ಬಂದಿದ್ದ ಪುಟ್ಟ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದು, ಕಾಣೆಯಾದ ಕೆಲವೇ ಗಂಟೆಗಳಲ್ಲಿ ಸಿಡಿಪಿಒ ಭವ್ಯಶ್ರೀ ಮತ್ತು ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಸಾವಿತ್ರಮ್ಮ ಅವರ ಮುಂಜಾಗ್ರತೆಯಿ0ದ ಬಾಲಕಿ ಪೋಷಕರ ಮಡಿಲು ಸೇರಿದ ಘಟನೆ ಇಂದು ನಡೆದಿದೆ. ಇಷ್ಟಕ್ಕೂ ಏನು ಆ ಸ್ಟೋರಿ ಅಂತೀರಾ, ನೀವೇ ನೋಡಿ.
ನಂಜನಗೂಡು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನೀಲಕಂಠ ನಗರ ಬಡಾವಣೆ ನಿವಾಸಿಯೋಗೇಶ್ ಎಂಬುವರ ಪತ್ನಿ ಸೌಭಾಗ್ಯ ತನ್ನ ತಾಯಿ ಮತ್ತು ನಾಲ್ಕು ವರ್ಷದ ಮಗಳ ಜೊತೆ ಚಿಕಿತ್ಸೆ ಪಡೆಯಲು ಬಂದಿದ್ದಾಳೆ. ತಾಯಿ ಜೊತೆ ಸೌಭಾಗ್ಯ ವೈದ್ಯರ ಬಳಿ ತೆರಳಿದಾಗ ಹೊರಗೆ ನಿಂತಿದ್ದ ಮಗಳು ದಿಕ್ಕು ತೋಚದೆ ನಾಪತ್ತೆಯಾಗಿದ್ದಳು. ಅಜ್ಜಿ ಮತ್ತು ತಾಯಿ ತನ್ನನ್ನು ಬಿಟ್ಟು ತೆರಳಿದ್ದಾರೆ ಎಂದು ಆತಂಕಪಟ್ಟ ಬಾಲಕಿ ಆಸ್ಪತ್ರೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದ ಹುಲ್ಲಹಳ್ಳಿ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಸಮೀಪದ ರಾಘವೇಂದ್ರ ಹಾರ್ಡ್ವೇರ್ ಅಂಗಡಿ ಮುಂದೆ ಅಳುತ್ತಾ ತಾಯಿ ಮತ್ತು ಅಜ್ಜಿಯ ಹುಡುಕಾಟದಲ್ಲಿದ್ದಾಳೆ.
ನಾಲ್ಕು ವರ್ಷದ ಬಾಲಕಿಯ ಚಲನವಲನ ಗಮನಿಸಿದ ಅಂಗಡಿ ಮಾಲೀಕರು, ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭವ್ಯಶ್ರೀ ಅವರಿಗೆ ದೂರವಾಣಿ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಸಿಡಿಪಿಒ ಭವ್ಯಶ್ರೀ ಮತ್ತು ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಸಾವಿತ್ರಮ್ಮ ಬಾಲಕಿಯನ್ನು ವಶಕ್ಕೆ ಪಡೆದು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾಲ ಮಗುವಿನ ಪೋಷಕರ ಹುಡುಕಾಟ ಮಾಡಿದ್ದಾರೆ.
ನಂತರ ಮಗು ಬಂದ ದಾರಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯಲ್ಲಿದ್ದ ತನ್ನ ಅಜ್ಜಿಯನ್ನು ಕಂಡ ಮಗೂ ಓಡಿಹೋಗಿ ಅಜ್ಜಿಯ ಮಡಿಲು ಸೇರಿದೆ. ಬಾಲಕಿಗಾಗಿ ಹುಡುಕಾಟ ನಡೆಸುತ್ತ ಆತಂಕದಲ್ಲಿದ್ದ ಪೋಷಕರು ನಿರಳರಾಗಿದ್ದಾರೆ. ಸಿಡಿಪಿಒ ಭವ್ಯಶ್ರೀ ಮತ್ತು ಸಾವಿತ್ರಮ್ಮ ಅವರಿಗೆ ಪೋಷಕರು ಮತ್ತು ಸ್ಥಳೀಯರು ಅಭಿನಂದನೆ ಹೇಳಿದ್ದಾರೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಜಾಗೃತಿಯಿಂದ ಪುಟ್ಟ ಬಾಲಕಿ ತಾಯಿಯ ಮಡಿಲು ಸೇರಿದೆ.