ಶೌಚಗುಂಡಿಗೆ ಮಕ್ಕಳನ್ನು ಇಳಿಸಿದ ಪ್ರಕರಣ : ಅಧ್ಯಯನಕ್ಕೆ ಬಿಜೆಪಿ ಸಮಿತಿ ರಚನೆ
1 min readಕೋಲಾರ ಜಿಲ್ಲೆಯ ಮಾಲೂರಿನ ಸಮೀಪದ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ನಿಲಯದ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಖಂಡಿಸಿದ್ದಾರೆ.
ಈ ಘಟನೆಯ ವಸ್ತುಸ್ಥಿತಿ ಅಧ್ಯಯನಕ್ಕೆ ರಾಜ್ಯ ಸಮಿತಿಯನ್ನು ರಚಿಸಿ ಅವರು ಆದೇಶ ಹೊರಡಿಸಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ಸಮಿತಿಯಲ್ಲಿ
ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಈ ಸಮಿತಿಯಲ್ಲಿ ಇದ್ದಾರೆ.
ಮಲದ ಗುಂಡಿ ಸ್ವಚ್ಛತೆ, ಮಕ್ಕಳಿಗೆ ಶಿಕ್ಷೆ ಕೊಡುವುದು ಸೇರಿದಂತೆ ಅಲ್ಲಿನ ಸಮಸ್ಯೆಗಳನ್ನೂ ಈ ಸಮಿತಿ ಪರಿಶೀಲಿಸಲಿದೆ. ಸ್ಥಳಕ್ಕೆ ಭೇಟಿ ಕೊಟ್ಟು ವಾಸ್ತವಾಂಶಗಳನ್ನು ಪರಿಶೀಲಿಸಿ ಈ ಸಮಿತಿಯು ರಾಜ್ಯಾಧ್ಯಕ್ಷರಿಗೆ ವರದಿ ಕೊಡಲಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಅಮಾನವೀಯ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಹಾಗೂ ವಸತಿ ನಿಲಯದ ಪ್ರಾಂಶುಪಾಲೆ ಹಾಗೂ ಸಹ ಶಿಕ್ಷಕನನ್ನು ಬಂಧಿಸಿ FIR ದಾಖಲಿಸಲಾಗಿದೆ.