ನಂಜನಗೂಡು ನಗರಸಭೆ ಆಡಳಿತದ ವಿರುದ್ಧ ಸಿಡಿದೆದ್ದ ಬಿಜೆಪಿ
1 min readನಂಜನಗೂಡು ನಗರಸಭೆ ಆಡಳಿತದ ವಿರುದ್ಧ ಸಿಡಿದೆದ್ದ ಬಿಜೆಪಿ
ಮಾಜಿ ಶಾಸಕ ಹರ್ಷವರ್ಧನ್ ನೇತೃತ್ವದಲ್ಲಿ ಖಾಲಿ ಕೂಡದೊಂದಿಗೆ ಪ್ರತಿಭಟನೆ
ಕುಡಿಯುವ ನೀರಿನ ಬಿಲ್ ಪಾವತಿಸದಂತೆ ಕರೆ ನೀಡಿದ ಮಾಜಿ ಶಾಸಕ
ನಂಜನಗೂಡು ನಗರ ವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್ ನೀಡಲಾಗುತ್ತಿದೆ, ಅನಧಿಕೃತ ಬಡಾವಣೆಗಳಿಗೆ ಎನ್‌ಒಸಿ ನೀಡಿ ದೊಡ್ಡ ಮಟ್ಟದಲ್ಲಿ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ನಗರಸಭೆ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ತಾಲೂಕಿನಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ, ಅವ್ಯವಹಾರ ನಡೆಯುವ ತಾಣ ನಂಜನಗೂಡು ನಗರಸಭೆ ಆಗಿದೆ ಎಂದು ಆರೋಪಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಹರ್ಷವರ್ಧನ್ ಉಪಸ್ಥಿತಿಯಲ್ಲಿ ನಗರಸಭೆಯ ಬಿಜೆಪಿ ಸದಸ್ಯರ ನೇತೃತ್ವದಲ್ಲಿ ಇಂದು ಪ್ರತಿಭಟನೆ ಆಯೋಜಿಸಲಾಗಿತ್ತು.
ಖಾಲಿ ಕೊಡ ಪ್ರದರ್ಶನ ಮಾಡುವ ಮೂಲಕ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಳೆದ ಒಂದುವರೆ ವರ್ಷದಿಂದ ನಂಜನಗೂಡಿನಲ್ಲಿ ಕಾಂಗ್ರೆಸ್ ಶಾಸಕರು ನಗರಸಭೆಯ ಮೊದಲ ಸಭೆಯಲ್ಲಿಯೇ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೇಳಿ ಕೇವಲ ಮಾತು ಹೇಳಿದ್ದರು. ಆದರೆ ಈಗ ಅದು ಮರೆಯಾಗಿದೆ, ನಂಜನಗೂಡಿನಲ್ಲಿ ನಿರಂತರವಾಗಿ ಕಳೆದ ಒಂದುವರೆ ವರ್ಷಗಳಿಂದ ಸರ್ಕಾರಿ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಸಾರ್ವಜನಿಕರ ಕೆಲಸಗಳಿಗೆ ಸಮಸ್ಯೆ ಎದುರಾಗಿದೆ, ತಮ್ಮ ಅಧಿಕಾರ ಅವಧಿಯಲ್ಲಿ ಕೆಲ ಅನಧಿಕೃತ ಬಡಾವಣೆಗಳ ಲೋಪ ದೋಷ ಕಂಡು ಬಂದ ಕೂಡಲೇ ಅವುಗಳಿಗೆ ಕಡಿವಾಣ ಹಾಕಲಾಗಿತ್ತು. ಇಂದಿನ ಶಾಸಕರ ಅವಧಿಯಲ್ಲಿ ಅನಧಿಕೃತ ಬಡಾವಣೆಗಳಿಗೆ ಎನ್‌ಒಸಿ ನೀಡಿ ಉತ್ತೇಜಿಸಲಾಗುತ್ತಿದೆ ಎಂದು ಪ್ರತಿಭಟನೆಯಲ್ಲಿ ಮಾಜಿ ಶಾಸಕ ಹರ್ಷವರ್ಧನ್ ವಾಗ್ದಾಳಿ ನಡೆಸಿದರು.
ನಗರಸಭೆ ಸದಸ್ಯ ಕಪಿಲೇಶ್ ಮಾತನಾಡಿ, ಅಧಿಕಾರಿಗಳ ದುರಾಡಳಿತದ ಬಗ್ಗೆ ನಂಜನಗೂಡು ನಗರದ ವಾಸಿಗಳು ಈಗಾಗಲೇ ರೊಚ್ಚಿಗೆದ್ದಿದ್ದಾರೆ. ಕೂಡಲೆ ಎಚ್ಚೆತ್ತು ಕುಡಿಯುವ ನೀರಿಗೆ ನೀಡುತ್ತಿರುವ ಬಿಲ್ಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಂದಾಗಬೇಕು. ತುರ್ತಾಗಿ ಎಲ್ಲ ಬೇಡಿಕೆಗಳನ್ನು ಈಡೇರಿಸಿದಿದ್ದಲ್ಲಿ ಕೆಲವೇ ದಿನಗಳಲ್ಲಿ ನಗರಸಭೆ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ಮತ್ತಷ್ಟು ಚುರುಕುಗೊಳಿಸಲು ಮುಂದಾಗುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಕಪಿಲೇಶ್, ಸಿದ್ದರಾಜು, ಮಹದೇವ ಪ್ರಸಾದ್, ಬಾಲಚಂದ್ರ, ಸಂಜಯ್, ಉಮೇಶ್ ಮೋದಿ ಇದ್ದರು.