ಚೊಕ್ಕಹಳ್ಳಿ ಜಮೀನು ಸರ್ವೇಗೆ ತಾತ್ಕಾಲಿಕ ತಡೆ! ಗುರುವಾರ ವಾಪಸ್ ಆದ ಸರ್ವೇ ಅಧಿಕಾರಿಗಳು
1 min readಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿ ಚೊಕ್ಕಹಳ್ಳಿ ಗ್ರಾಮದ ಸರ್ವೆ ನಂ.16ರ ಸರ್ಕಾರಿ ಜಮೀನು ಅಳತೆಗೆ ಶಾಸಕ ಪ್ರದೀಪ್ ಈಶ್ವರ್ ಸೂಚನೆ ನೀಡಿದ್ದು, ಎರಡು ದಿನಗಳಿಂದ ನಡೆಯುತ್ತಿರುವ ಸರ್ವೇ ಕಾರ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ.
ಚೊಕ್ಕಹಳ್ಳಿ ಗ್ರಾಮದ ಸರ್ವೆ ನಂಬರ್ 16ರಲ್ಲಿ 42 ಎಕರೆ ಸರ್ಕಾರಿ ಭೂಮಿ ಇದೆ. ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಕೆ.ವಿ ಕ್ಯಾಂಪಸ್ ಆಸುಪಾಸಿನವರೆಗೂ ಈ ಜಮೀನು ಬರುತ್ತದೆ ಎಂಬುದು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳ ಮಾಹಿತಿ. ಶಿಕ್ಷಣ ಸಂಸ್ಥೆಯ ಸಮೀಪ ಈ ಜಮೀನು ಒತ್ತುವರಿಯಾಗಿದೆಯೇ ಇಲ್ಲವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅಳತೆ ನಡೆಯುತ್ತಿದೆ.
ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಮೀನು ಅಳತೆ ಮಾಡಬೇಕು. ಸರ್ಕಾರಿ ಜಮೀನು ಒತ್ತುವರಿ ಆಗಿದ್ದರೆ ತೆರವುಗೊಳಿಸಬೇಕು ಎಂದು ಪ್ರದೀಪ್ ಈಶ್ವರ್ ಸೂಚನೆ ನೀಡಿದ್ದಾರೆ. ಶಾಸಕರು ಸೂಚನೆ ನೀಡಿದ ನಂತರ ಅಧಿಕಾರಿಗಳು ಅಳತೆಗೆ ಮುಂದಾಗಿದ್ದಾರೆ.
ಶಾಸಕರ ಮೌಖಿಕ ಆದೇಶದ ಮೇರೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಸರ್ವೆಗೆ ಮುಂದಾಗಿದೆ. ಸದರಿ ಸರ್ವೆ ನಂಬರ್‌ಗೆ ಸಂಬಂಧಪಟ್ಟ ಮೂಲ ಮಂಜೂರಿ ಕಡತ ಹಾಗೂ 53, 57 ಅರ್ಜಿ ಸಲ್ಲಿಕೆಯ ಬಗ್ಗೆ ವಿವರ ಹಾಗೂ ಗುತ್ತಿಗೆ ನೀಡಿದ್ದಲ್ಲಿ ಆ ಬಗ್ಗೆ ದಾಖಲೆಗಳನ್ನು ಅಳತೆಗೆ ಮುನ್ನ ಭೂ ಮಾಪಕರಿಗೆ ನೀಡುವುದು ಅಳತೆ ವೇಳೆ ಸಂಬಂಧಪಟ್ಟ, ಪಿಡಿಒ, ಗ್ರಾಮ ಆಡಳಿತಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ಖುದ್ದು ಹಾಜರಿದ್ದು ಭೂಮಾಪಕರಿಗೆ ಮಾಹಿತಿ ಒದಗಿಸಲು ಕೋರಿದೆ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿದ್ದಾರೆ.
2018ರ ವಿಧಾನಸಭೆ ಚುನಾವಣೆ ವೇಳೆ ಒಂದೇ ತೆಕ್ಕೆಯಲ್ಲಿದ್ದ ಕೆ.ವಿ.ನವೀನ್ ಕಿರಣ್ ಮತ್ತು ಇಂದಿನ ಶಾಸಕ ಪ್ರದೀಪ್ ಈಶ್ವರ್ 2023ರ ಚುನಾವಣೆ ವೇಳೆಗೆ ವಿರೋಧಿಗಳಾಗಿದ್ದಾರೆ. 2018ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ.ವಿ.ನವೀನ್ ಕಿರಣ್ ಪರ ಅಂದು ಪ್ರದೀಪ್ ಈಶ್ವರ್ ಅಬ್ಬರದ ಪ್ರಚಾರ ಮಾಡಿದ್ದರು. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕೆ.ವಿ.ನವೀನ್ ಕಿರಣ್, ಡಾ.ಕೆ.ಸುಧಾಕರ್ ಅವರ ಮೂಲಕ ಬಿಜೆಪಿ ಸೇರಿದರು. ಒತ್ತಡದಿಂದಲೇ ಬಿಜೆಪಿ ಸೇರಿದರು ಎನ್ನುವ ಮಾತುಗಳು ಆಗ ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಜೋರಾಗಿದ್ದವು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರದೀಪ್ ಈಶ್ವರ್ ವಿರುದ್ಧ ನವೀನ್ ಕಿರಣ್ ಟೀಕಾಪ್ರಹಾರವನ್ನೇ ನಡೆಸಿದ್ದರು. ಪ್ರದೀಪ್ ಈಶ್ವರ್ ನವೀನ್ ಕಿರಣ್ ಅವರ ವಿರುದ್ಧ ಗುಡುಗಿದ್ದರು. ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಗೆಲುವು ಸಾಧಿಸಿದ್ದರು.
ಬುಧವಾರ ಬೆಳಿಗ್ಗೆ 10.30ರಿಂದ ಭೂಮಾಪನ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಸಂಜೆಯವರೆಗೂ ಸರ್ವೆ ನಡೆಯಿತು. ಈ ಸರ್ಕಾರಿ ಭೂಮಿ ಒಟ್ಟು 42.38 ಎಕರೆ ಇದೆ. ಅಗಲಗುರ್ಕಿ ಗಡಿಯಿಂದ ಪೂರ್ವ ಭಾಗದ ಸುಮಾರು 10ಕ್ಕೂ ಹೆಚ್ಚು ನಂಬರ್‌ಗಳ ಜಮೀನುಗಳ ಅಳತೆ ಪೂರ್ಣವಾಗಿದೆ. ಗುರುವಾರ ಉಳಿದ ನಂಬರ್‌ಗಳ ಸರ್ವೆ ನಡೆಯಿತು.
ಅಳತೆ ವೇಳೆ ಆಕ್ಷೇಪ, ವಾಗ್ವಾದಗಳು ಸಂಭವಿಸಬಹುದೇ ಎನ್ನುವ ಕಾರಣಕ್ಕೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೆ.ವಿ ಕ್ಯಾಂಪಸ್ ಹಿಂಭಾಗದ ಸರ್ಕಾರಿ ಜಮೀನಿನ ಸರ್ವೆ ಮುಗಿಸಿದ ನಂತರ ಆವರಣದೊಳಗೆ ಸರ್ವೇ ಕಾರ್ಯ ನಡೆಸಲು ಅಧಿಕಾರಿಗಳು ಮುಂದಾದ ವೇಳೆ ಅಧಿಕೃತವಾಗಿ ನೋಟಿಸ್ ನೀಡಿ ನಂತರ ಸರ್ವೇ ಮುಂದುವರಿಸುವಂತೆ ಸ್ಥಳದಲ್ಲಿದ್ದವರು ಹೇಳಿದ್ದು, ಇದರಿಂದ ಅಧಿಕಾರಿಗಳು ವಾಪಸ್ ಆಗಿದ್ದಾರೆ.
ಈ ಸರ್ವೇ ರಾಜಕೀಯ ದುರುದ್ಧೇಶದಿಂದಲೇ ನಡೆಯುತ್ತಿದೆ ಎಂಬ ಆರೋಪಗಳು ಕ್ಷೇತ್ರದಲ್ಲಿ ವ್ಯಾಪಕವಾಗಿ ಕೇಳಿಬಂದಿವೆ. ಈ ಸಂಬಂಧ ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಹೊಸದೊಂದು ಶಖೆ ಆರಂಭವಾಗುವ ಸೂಚನೆಗಳು ಗೋಚರಿಸತೊಡಗಿದ್ದು, ಮುಂದಿನ ದಿನಗಳಲ್ಲಿ ಇದು ಎತ್ತ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
https://youtube.com/@ctvnewschikkaballapura?si=C-CJWuVfM-65JQMa