ಬೆಂಗಳೂರಲ್ಲಿ ದೀಪಾವಳಿ ಆಚರಿಸಿದ ಟೀಮ್ ಇಂಡಿಯಾ ಆಟಗಾರರು
1 min readಬೆಂಗಳೂರಿನಲ್ಲಿ ಭಾರತ ತಂಡ ಆಟಗಾರರು ಸಾಂಪ್ರದಾಯಿಕ ಉಡುಗೆ ತೊಟ್ಟು ದೀಪಾವಳಿ ಹಬ್ಬವನ್ನು ಆದ್ಧೂರಿಯಾಗಿ ಆಚರಿಸಿದರು.
ಬೆಂಗಳೂರು: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜೊತೆಗೆ ವಿಶ್ವಕಪ್ನ ಲೀಗ್ ಹಂತದ ಕೊನೆ ಪಂದ್ಯಾಟಕ್ಕೆ ಬೆಂಗಳೂರಿಗೆ ಬಂದಿಳಿದಿರುವ ಭಾರತ ತಂಡದ ಆಟಗಾರರು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ಇಂದು ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಭಾರತವು ಲೀಗ್ ಹಂತದ 8 ಪಂದ್ಯಗಳಲ್ಲಿ ಗೆದ್ದು ಬೀಗಿದ್ದು, ಸೆಮಿಫೈನಲ್ ಸೆಣಸಾಟಕ್ಕೆ ಸಜ್ಜಾಗಿದೆ. ಭಾರತವು ಇಂದು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.
ಇದಕ್ಕೂ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ಟೀಮ್ ಇಂಡಿಯಾ ಆಟಗಾರರು ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಿದರು. ಈ ವೇಳೆ ಕುಟುಂಬಸ್ಥರು, ಭಾರತ ತಂಡದ ಸದಸ್ಯರು ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ದೀಪಾವಳಿ ಆಚರಣೆಯ ಫೋಟೋವನ್ನು ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆ ಎಲ್ ರಾಹುಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಭಾರತ ತಂಡದ ಆಟಗಾರರು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ.
ದೀಪಾವಳಿಗೆ ಶುಭ ಕೋರಿದ ಆಟಗಾರರು: ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ನಾಯಕ ರೋಹಿತ್ ಶರ್ಮಾ ತಮ್ಮ ಪತ್ನಿ ನಿಕಿತಾ ಅವರೊಂದಿಗಿರುವ ಫೋಟೋ ಹಂಚಿಕೊಂಡು ದೀಪಾವಳಿಯ ಶುಭಾಶಯ ಕೋರಿದ್ದಾರೆ. ಕೆ ಎಲ್ ರಾಹುಲ್ ಅವರೂ ಟೀಮ್ ಇಂಡಿಯಾ ಜೊತೆಗೆ ದೀಪಾವಳಿ ಆಚರಿಸುತ್ತಿರುವ ಫೋಟೋ ಹಂಚಿಕೊಂಡು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶುಭ್ಮನ್ ಗಿಲ್, ಇಶನ್ ಕಿಶನ್, ಕುಲ್ದೀಪ್ ಯಾದವ್ ಸೇರಿದಂತೆ ಹಲವರು ಶನಿವಾರ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಸೂರ್ಯ ಕುಮಾರ್ ತಮ್ಮ ಪತ್ನಿಯೊಂದಿಗೆ ಇರುವ ಫೋಟೋ ಹಂಚಿಕೊಂಡು ದೀಪಾವಳಿ ಹಬ್ಬಕ್ಕೆ ಶುಭ ಕೋರಿದ್ದಾರೆ.
ಭಾರತ – ನೆದರ್ಲೆಂಡ್ ಪಂದ್ಯ : ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವೆ ಪಂದ್ಯ ನಡೆಯಲಿದೆ. ಲೀಗ್ ಹಂತದ ಪಂದ್ಯದಲ್ಲಿ ಸತತ ಎಂಟು ಪಂದ್ಯಗಳಲ್ಲಿ ಗೆದ್ದು ಬೀಗಿರುವ ಭಾರತ 9 ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ.
ಈಗಾಗಲೇ ಸೆಮೀಸ್ ಹಂತದಲ್ಲಿ ಕಾದಾಟ ನಡೆಸುವ ತಂಡಗಳು ಅಂತಿಮಗೊಂಡಿದ್ದು, ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ಕಾದಾಟ ನಡೆಸಲಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕಾದಾಟ ನಡೆಸಲಿದೆ. ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಹೈ ವೋಲ್ಟೇಜ್ ಪಂದ್ಯ ನವೆಂಬರ್ 15ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.