
ಅಗ್ನಿ ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಪಾಲಿಸಿ
ಘಂಟ0ವಾರಿಪಲ್ಲಿ ಶಾಲೆ ವಿದ್ಯಾರ್ಥಿಗಳಿಗೆ ಜಾಗೃತಿ
ಅಗ್ನಿ ಅವಘಡ ಸಂಭವಿಸಿದಾಗ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಬಾಗೇಪಲ್ಲಿ ತಾಲೂಕು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅಣಕು ಪ್ರದರ್ಶನ ನಡೆಸಲಾಯಿತು.
ಬಾಗೇಪಲ್ಲಿ ತಾಲೂಕಿನ ಘಂಟ0ವಾರಿಪಲ್ಲಿ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಇಂದು ನಡೆದ ಅಣಕು ಪ್ರದರ್ಶನದಲ್ಲಿ ನೆಲ ಬಾಂಬ್ ಸ್ಫೋಟಗೊಂಡಾಗ ಗಾಯಗೊಂಡವರಿಗೆ ಯಾವ ರೀತಿ ಉಪಚರಿಸಬೇಕು, ಬಹುಮಹಡಿ ಕಟ್ಟಡದಲ್ಲಿ ಬೆಂಕಿ, ಗುಡಿಸಿಲುಗಳಿಗೆ ಹಾಗೂ ಪೆಟ್ರೋಲ್ ಬಂಕ್‌ಗಳಲ್ಲಿ ಬೆಂಕಿ ಅವಘಡಗಳು, ಜಲ ಪ್ರಳಯ, ರಸ್ತೆ ಅಪಘಾತಗಳು ಸಂಭವಿಸಿದ ವೇಳೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಈ ವೇಳೆ ಬಾಗೇಪಲ್ಲಿ ತಾಲೂಕಿನ ಅಗ್ನಿ ಶಾಮಕ ಅಧಿಕಾರಿ ಮೈಲಾರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳಿಂದಾಗಿ ವಾತವರಣ ಕಲುಷಿತಗೊಂಡು ವಿವಿಧ ಅವಗಢಗಳು ಸಂಭವಿಸುತ್ತಿವೆ. ಸಾರ್ವಜನಿಕರು ನಿತ್ಯ ಜೀವನದ ಜಂಜಾಟದಲ್ಲಿ ಸುರಕ್ಷತೆ ಕ್ರಮಗಳನ್ನು ಮರೆತಿದ್ದಾರೆ. ಯಾವುದೇ ದುರ್ಘಟನೆ ಸಂಭವಿಸಿದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡಲಾಗುತ್ತಿದೆ ಎಂದರು.
ತುರ್ತು ಸಂದರ್ಭದಲ್ಲಿ ಯಾವ ಇಲಾಖೆ ಯಾವ ಕಾರ್ಯ ನಿರ್ವಹಿಸ ಬೇಕೆಂದು ಪ್ರಾತ್ಯಕ್ಷಿಕೆ ಮೂಲಕ ಮನವರಿಕೆ ಮಾಡಿಕೊಡಲಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಎಂತಹ ತುರ್ತು ಸಂದರ್ಭದಲ್ಲಿಯೂ ಎದೆಗುಂದದೆ ಧೈರ್ಯವಾಗಿ ಕೈಗೊಳ್ಳಬಹುದಾದ ಕ್ರಮಗಳನ್ನು ನಿಭಾಯಿಸಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಜಗದೀಶ್, ಮಹಮ್ಮದ್ ಯೂನಸ್ ಖಾನ್, ಹೇಮಂತ್, ಲೇಖನ್, ಮುಖ್ಯ ಶಿಕ್ಷಕಿ ಜಿ. ರಾಮಸುಬ್ಬಮ್ಮ ಇದ್ದರು.