ಕುಟುಂಬದ ರಕ್ಷಣೆಯಂತೆ ಪರಿಸರ ಸಂರಕ್ಷಣೆಗೂ ಕಾಳಜಿ ವಹಿಸಿ: ಶಾಸಕ ಕೆ.ಎಂ.ಉದಯ್
1 min readಕುಟುಂಬದ ರಕ್ಷಣೆಯಂತೆ ಪರಿಸರ ಸಂರಕ್ಷಣೆಗೂ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಮಂಗಳವಾರ ವನಮಹೋತ್ಸವ ಕಾರ್ಯಕ್ರಮ ನಿಮಿತ್ತ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆಯ ಜವಾಬ್ದಾರಿ ತಮ್ಮ ತಮ್ಮ ಮನೆಗಳಿಂದಲೇ ಆದಾಗ ಮಾತ್ರ ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಯವರು ನಿರ್ಭೀತಿಯಿಂದ ಬದುಕಲು ಸಾಧ್ಯವಾಗುತ್ತದೆ.
ವರ್ಷ ಪೂರ್ತಿ ಮರಗಳನ್ನು ಕಡಿದು ಪರಿಸರ ದಿನದಂದು ನಾಲ್ಕು ಗಿಡಗಳನ್ನು ನೆಡುವುದಲ್ಲ ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ನಗರೀಕರಣ, ಪರಿಸರ ಮಾಲಿನ್ಯ ದಿನೇ ದಿನೇ ಅದರೊಂದಿಗೆ ಬೆರೆಯುತ್ತಿದ್ದು, ಇದು ಆತಂಕಕಾರಿ ಸಂಗತಿಯಾಗಿದೆ ಎಂದರು.
ಅಭಿವೃಧ್ಧಿ ಮತ್ತು ವಿನಾಶ ಒಟ್ಟಿಗೆ ಸಾಗಬಾರದು, ಇರುವ ಒಂದು ಭೂಮಿಯನ್ನು ರಕ್ಷಿಸಲು ನಾವೆಲ್ಲ ಟೊಂಕಕಟ್ಟಿ ನಿಲ್ಲಬೇಕು. ಪರಿಸರ ಸ್ವಚ್ಛತೆಯ ಬಗ್ಗೆ ನಾವುಗಳು ಸೇರಿದಂತೆ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು. ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು ನಡೆದಾಗ ಮಾತ್ರ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ನೀಡಿದಂತಾಗುತ್ತದೆ ಎಂದರು.
ಇದೇ ವೇಳೆ ವಲಯ ಅರಣ್ಯಾಧಿಕಾರಿ ಗವಿಯಪ್ಪ, ಶೈಲೇಂದ್ರ ಕುಮಾರ್, ಗ್ರಾ.ಪಂ ಅಧ್ಯಕ್ಷೆ ಸಾವಿತ್ರಮ್ಮ, ಉಪ ವಲಯ ಅರಣ್ಯಾಧಿಕಾರಿಗಳಾದ
ರವಿ, ಕಾಂತರಾಜು, ಶಿವರಾಜ್, ಪ್ರಾಂಶುಪಾಲ ಪ್ರಕಾಶ್ ಬಾಬು, ಉಪನ್ಯಾಸಕರಾದ ಚನ್ನಂಕೇಗೌಡ, ಪ್ರತಾಪ್, ಸಿಬ್ಬಂದಿಗಳಾದ ಸುದರ್ಶನ್, ಸಿದ್ದೇಗೌಡ, ಪಿಡಿಒ ಶಂಭುಲಿಂಗಯ್ಯ, ಗ್ರಾ.ಪಂ ಸದಸ್ಯ ಪ್ರೀತಂ, ಹನುಮೇಗೌಡ, ಮುಖಂಡರಾದ ಅಪ್ಪೇಗೌಡ, ರಾಜೇಂದ್ರ, ಸುದೀ ಮತ್ತಿತರರು ಇದ್ದರು.