ಕೊಪ್ಪಳದ ರೈತರಿಗೆ ಬಂತು ಫಸಲ್ ಬಿಮಾ ವಿಮಾ ಯೋಜನೆಯ ಮಧ್ಯಂತರ ಪರಿಹಾರ: ಸಂಕಟದಲ್ಲಿರುವ ಅನ್ನದಾತನಿಗೆ ಆಸರೆ
1 min read
1 year ago
ಮಳೆಯಿಲ್ಲದೆ ಬರದಿಂದ ಕಂಗೆಟ್ಟಿದ್ದ ಕೊಪ್ಪಳ ಜಿಲ್ಲೆಯ 7 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿತ್ತು. ಸರ್ಕಾರದಿಂದ ಬರ ಪರಿಹಾರ ಶೀಘ್ರ ಬರುವ ನಿರೀಕ್ಷೆಯ ನಡುವೆಯೇ, ವಿಮೆ ತುಂಬಿತ ರೈತರಿಗೆ ಮಧ್ಯಂತರ ಪರಿಹಾರ ಹಣ ಬಿಡುಗಡೆಯಾಗಿದೆ. ಕೊಪ್ಪಳದಲ್ಲಿ ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೆಳೆಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗಿದೆ.
ಆಪತ್ಕಾಲಕ್ಕೆ ನೆರವು ಎಂಬಂತೆ ಬರದಿಂದ ಬಳಲಿ ಬೆಂಡಾಗಿರುವ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ.ಮಧ್ಯಂತರ ಪರಿಹಾರ ಬಂದಿದೆ.ಭೀಕರ ಬರ ಹಿನ್ನೆಲೆ ವಿಮೆ ತುಂಬಿದ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿಸುವಂತೆ ಕಳೆದ ವಾರ ಜಿಲ್ಲಾಡಳಿತ ಸರಕಾರಕ್ಕೆ ವರದಿ ಸಲ್ಲಿಸಿತ್ತು.
ವರದಿಯನ್ವಯ ಸರಕಾರ, ವಿಮಾ ಕಂಪನಿಗಳಿಗೆ ರೈತರಿಗೆ ನೀಡಬೇಕಾದ ಮಧ್ಯಂತರ ಪರಿಹಾರ ನೀಡಿ ಎಂದು ಆದೇಶಿಸಿತ್ತು. ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಗೆ ಹಣ ಬಿಡುಗಡೆಯಾಗಿದ್ದು, ಅನ್ನದಾತರ ಖಾತೆಗೆ ಹಂತ-ಹಂತವಾಗಿ ಜಮೆಯಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 1.15 ಲಕ್ಷ ಹೆಕ್ಟೇರ್ ಮೆಕ್ಕೆಜೋಳ, 56 ಸಾವಿರ ಹೆಕ್ಟೇರ್ ಸಜ್ಜೆ, 19 ಸಾವಿರ ಹೆಕ್ಟೇರ್ ತೊಗರಿ, 8 ಸಾವಿರ ಹೆಕ್ಟೇರ್ ಶೇಂಗಾ, 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಈ ಪೈಕಿ 47,228 ಹೆಕ್ಟೇರ್ ಪ್ರದೇಶಕ್ಕೆ 74,781 ರೈತರು ಬೆಳೆ ವಿಮೆ ಪಾವತಿ ಮಾಡಿದ್ದಾರೆ. ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೆಳೆಗೆ ಮಧ್ಯಂತರ ಪರಿಹಾರ ನೀಡಲು ಸರಕಾರ ಆದೇಶ ಮಾಡಿದ್ದು, ವಿಮಾ ಕಂಪನಿಯಿಂದ ಹಣ ಬಿಡುಗಡೆ ಮಾಡಲಾಗಿದೆ.