ದುಶ್ಚಟಗಳಿಗೆ ದಾಸರಾಗದೆ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಿ
1 min read
ದುಶ್ಚಟಗಳಿಗೆ ದಾಸರಾಗದೆ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಿ
ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಮಂಜುನಾಥಾಚಾರಿ
ವಿದ್ಯಾರ್ಥಿಗಳು ಮತ್ತು ಯುವಕರು ದುಶ್ಚಟಗಳಿಗೆ ದಾಸರಾಗಿ ಕಾಲಹರಣ ಮಾಡದೇ, ಉತ್ತಮ ಶಿಕ್ಷಣ ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶ್ರಮಿಸಬೇಕು ಎಂದು ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಧೀಶ ಮಂಜುನಾಥಾಚಾರಿ ಹೇಳಿದರು.
ಬಾಗೇಪಲ್ಲಿ ಪಟ್ಟಣದ ವಿಆರ್ ಅಕಾಡೆಮಿಯಲ್ಲಿ ಆಯೋಜಿಸಿದ್ದ ರಾಷ್ಟಿಯ ಯುವ ದಿನೋತ್ಸವ ಹಿನ್ನಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಧೀಶ ಮಂಜುನಾಥಾಚಾರಿ, ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗಿ, ಮೊಬೈಲ್ ಗೀಳಿಗೆ ಬಿದ್ದು ಕಾಲಹರಣ ಮಾಡದೆ, ತಮ್ಮ ಭವಿಷ್ಯಕ್ಕಾಗಿ ಶ್ರಮಿಸಬೇಕು. ತಂದೆ, ತಾಯಿಯ ಶ್ರಮವನ್ನು ಗಮನದಲ್ಲಿಟ್ಟುಕೊಂಡು ಅವರ ಸಂತಸಕ್ಕೆ ಕಾರಣವಾಗುವ ರೀತಿಯಲ್ಲಿ ಗುರಿ ಸಾಧನೆಗಾಗಿ ನಿರಂತರ ಪರಿಶ್ರಮ ಪಡಬೇಕು ಎಂದರು.
ವಿದ್ಯಾರ್ಥಿ ಬದುಕು ಹಲವು ತುಮಲುಗಳನ್ನೊಳಗೊಂಡಿದೆ. ಗುರಿ ಸಾಧನೆಗಾಗಿ ವಿಚಾರವಂತರಾಗಬೇಕಿದೆ. ಶೇ.100 ಅಂಕ ಪಡೆಯಬೇಕೆಂದು ಓದುವ ವಿದ್ಯೆಗಿಂತ ಸಕಾರಾತ್ಮಕ ಜೀವನದ ಮಾರ್ಗಕ್ಕಾಗಿ ಓದಬೇಕಿದೆ. ಜಸ್ಟ್ ಪಾಸ್ ಆದರೂ ಜೀವನ ರೂಪಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಸಣ್ಣ ಆಸೆ-ಆಕಾಂಕ್ಷೆಗಳು ಈಡೇರಲಿಲ್ಲ, ಇಂತಿಷ್ಟೇ ಅಂಕಗಳು ಬರಬೇಕಿತ್ತು, ಬದುಕಿನಲ್ಲಿ ಸಿಗಬೇಕಾದದ್ದು ಸಿಗುತ್ತಿಲ್ಲ ಎಂದು ನಿರಾಸೆ ಪಟ್ಟು, ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳು ತೆಗೆದುಕೊಳ್ಳಬಾರದು. ದೃಢ ಸಂಕಲ್ಪದೊ0ದಿಗೆ ಶ್ರಮ ನಂಬಿ ಬದುಕಿನಲ್ಲಿ ಸಾಧಿಸಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ ಮಾತನಾಡಿ, ಯುವ ಜನತೆ ಇತ್ತೀಚೆಗೆ ಮಾನಸಿಕವಾಗಿ ಗೊಂದಲಗಳಿ0ದ ಸದೃಢತೆ ಇಲ್ಲದಂತಾಗಿದ್ದಾರೆ. ಬಹಳಷ್ಟು ಪ್ರಕರಣಗಳನ್ನು ಖಿನ್ನತೆಗೊಳಗಾಗಿ ಆತ್ಮಹತ್ಯಾ ಯತ್ನಗಳು ಹೆಚ್ಚಾಗುತ್ತಿವೆ. ಮಾನಸಿಕವಾಗಿ ದೃಢತೆ ಸಾಧಿಸಲು ನಿರಂತರವಾಗಿ ಧ್ಯಾನ, ವ್ಯಾಯಾಮ ಮಾಡಬೇಕು. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡಾಗ ಗುರಿ ಸಾಧನೆಗೆ ಸಹಕಾರಿ ಎಂದು ತಿಳಿಸಿದರು.
ಈ ವೇಳೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ. ನಂಜು0ಡಪ್ಪ, ಉಪಾಧ್ಯಕ್ಷ ಜಿ.ಎಸ್. ರಾಮಾಂಜಿ, ಕಾರ್ಯದರ್ಶಿ ಪ್ರಸನ್ನಕುಮಾರ, ಖಜಾಂಚಿ ಮಂಜುನಾಥ್, ಸಹಾಯಕ ಸರಕಾರಿ ಅಭಿಯೋಜಕ ಚಿನ್ನಸ್ವಾಮಿ, ಪ್ರಾಂಶುಪಾಲ ಶ್ರೀನಿವಾಸರೆಡ್ಡಿ, ಸಿಡಿಪಿಒ ಕೆ.ವಿ. ರಾಮಚಂದ್ರ, ವಕೀಲರಾದ ಫಯಾಜ್ ಬಾಷಾ, ಗುರುನಾಥ್, ವೆಂಕಟೇಶ್ ಇದ್ದರು.