ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ
1 min readರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ
ಗೌರಿಬಿದನೂರು ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆ
ರಾಜ್ಯ ಸರಕಾರಿ ನೌಕರರ ಸಂಘದ ಗೌರಿಬಿದನೂರು ತಾಲೂಕು ಅಧ್ಯಕ್ಷರಾಗಿ ವೇದಲವೇಣಿ ಸರಕಾರಿ ಶಾಲೆ ಶಿಕ್ಷಕ ಎನ್.ಆರ್. ಮಂಜುನಾಥ್ ಆಯ್ಕೆಯಾಗಿದ್ದಾರೆ.
ಗೌರಿಬಿದನೂರು ತಾಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಸಂಘದ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆಇಂದು ಚುನಾವಣೆ ನಡೆಯಿತು. ಒಟ್ಟು 28 ಮಂದಿ ನಿರ್ದೇಶಕರು ಮತ ಚಲಾಯಿಸಿದರು. ಅಧ್ಯಕ್ಷ ಸ್ಥಾನಕ್ಕೆ ಎನ್.ಆರ್. ಮಂಜುನಾಥ್ ಹಾಗೂ ಆರ್. ವೆಂಕಟೇಶ್ ರೆಡ್ಡಿ ಸ್ಪರ್ಧಿಸಿದ್ದರು. ಎನ್.ಆರ್. ಮಂಜುನಾಥ್ 22 ಮತ ಪಡೆದು ಗೆಲುವು ಸಾಧಿಸಿದರು. ವೆಂಕಟೇಶ್ ರೆಡ್ಡಿ 6 ಮತ ಪಡೆದು ಪರಾಭವಗೊಂಡರು.
ರಾಜ್ಯ ಸಮಿತಿ ಸ್ಥಾನಕ್ಕೆ ಉಪನ್ಯಾಸಕ ಎಂ.ಎನ್. ಕೃಷ್ಣಪ್ಪ ಹಾಗೂ ಬಿ.ವಿ. ಸೋಮಶೇಖರ್ ಸ್ಪರ್ಧಿಸಿದ್ದರು. ಕೃಷ್ಣಪ್ಪ 15 ಮತ ಪಡೆದು ಗೆಲುವು ಸಾಧಿಸಿದರೆ, ಸೋಮಸುಂದರ್ 13 ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಸಿ.ಎನ್. ಶಂಕರ ರೆಡ್ಡಿ ಫಲಿತಾಂಶ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಎನ್ ಆರ್ ಮಂಜುನಾಥ್, ರಾಜ್ಯ ಪರಿಷತ್ ಸದಸ್ಯರಾಗಿ ಎಂ ಎನ್ ಕೃಷ್ಣಪ್ಪ ಹಾಗೂ ಖಜಾಂಚಿಯಾಗಿ ಅವಿರೋಧ ಆಯ್ಕೆಯಾದ ಎಲ್ ಎ ಶಶಿಧರ್ ಅವರನ್ನು ಶಾಸಕರ ಅಪ್ತ ಕಾರ್ಯದರ್ಶಿ ಶ್ರೀನಿವಾಸ ಗೌಡ ಆತ್ಮೀಯವಾಗಿ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಶಾಸಕ ಪುಟ್ಟಸ್ವಾಮಿ ಗೌಡರ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ತಾಲ್ಲೂಕಿನ ಅಧಿಕಾರಿಗಳು ಶಾಸಕರ ಬೆಂಬಲಿತ ಅಭ್ಯರ್ಥಿಗಳಿಗೆ ಅಭೂತಪೂರ್ವ ಗೆಲುವು ನೀಡಿದ್ದಾರೆ ಎಂದರು.