ಕೊಲ್ಲೂರು – ಸಿಗಂಧೂರು ಸಂಪರ್ಕ ಕಲ್ಪಿಸುವ ಕಳಸವಳ್ಳಿ ಸೇತುವೆ ಕಾಮಗಾರಿಗೆ ವೇಗ; ಯಾವಾಗ ಉದ್ಘಾಟನೆ?
1 min readಕರಾವಳಿ ಹಾಗೂ ಮಲೆನಾಡಿನ ಜನರ ದಶಕಗಳ ಕನಸು ಕೊಲ್ಲೂರು ಸಿಂಗಧೂರು ನಡುವೆ ಸಂಪರ್ಕ ಕಲ್ಪಿಸುವ ಸೇವೆ ಕಾಮಗಾರಿಯು ಮತ್ತೆ ವೇಗ ಪಡೆದುಕೊಂಡಿದೆ. ಮುಂದಿನ ಮಧ್ಯಭಾಗದಲ್ಲಿ ಕಾಮಗಾರಿ ಮುಗಿಸುವ ಗುರಿಯನ್ನು ನಿರ್ಮಾಣ ಕಂಪನಿ ಹೊಂದಿದೆ.
ಪ್ರಸಿದ್ಧ ಯಾತ್ರಾಕ್ಷೇತ್ರಗಳಾದ ಕೊಲ್ಲೂರು ಮತ್ತು ಸಿಗಂಧೂರು ಸಂಧಿಸಲು ಅನುಕೂಲವಾಗುವಂತೆ 2019ರಲ್ಲಿಆರಂಭಗೊಂಡಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿ- ಅಂಬರಗೊಡ್ಲು ಸಂಪರ್ಕ ಸೇತುವೆ ಕಾಮಗಾರಿಗೆ ಮತ್ತೆ ವೇಗ ದೊರಕಿದೆ. ಕಳೆದ 4 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಸೇತುವೆ ಕಾಮಗಾರಿಗೆ ವೇಗ ಹೆಚ್ಚಿಸುವ ನಿಟ್ಟಿನಲ್ಲಿಆಡಳಿತ ಕ್ರಮ ವಹಿಸಿದೆ.
ಶಿವಮೊಗ್ಗ ಜಿಲ್ಲೆಯ ಧುರೀಣರಾದ ಬಿ.ಎಸ್.ಯಡಿಯೂರಪ್ಪ ಮತ್ತು ಕಾಗೋಡು ತಿಮ್ಮಪ್ಪ ಅವರ ಪ್ರಯತ್ನದ ಫಲವಾಗಿ ಲಿಂಗನಮಕ್ಕಿ ಹಿನ್ನೀರು ಪ್ರದೇಶದ ಕಳಸವಳ್ಳಿ ಎಂಬಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನದೊಂದಿಗೆ 424ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿಗೆ ಚಾಲನೆ ದೊರಕಿತ್ತು. ಕಳೆದ 5 ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿಗೆ ಈಗ ವೇಗ ದೊರಕಿದೆ.
ದೇಶದ 2ನೇ ಕೇಬಲ್ ಆಧಾರಿತ ಸೇತುವೆ
ಇದು ಏಷ್ಯಾದ 7ನೇ ಅತಿ ಉದ್ದದ, ದೇಶದ 2ನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ. ಅಲ್ಲದೆ ರಾಜ್ಯದ 2ನೇ ಅತಿ ಉದ್ದದ ಸೇತುವೆ ಹೆಗ್ಗಳಿಕೆ ಹೊಂದಿದೆ. 2.14 ಕಿಮೀ ಉದ್ದ, 16ಮೀಟರ್ ಅಗಲ ಹೊಂದಿದೆ. ಮಧ್ಯಪ್ರದೇಶದ ದಿಲೀಪ್ ಬಿಲ್ಡ್ ಕಂಪನಿ ಕಾಮಗಾರಿಯ ಉಸ್ತುವಾರಿ ಹೊತ್ತಿದೆ. ಶೇ.70ರಷ್ಟು ಕಾಮಗಾರಿ ನಡೆದಿದ್ದು ಮಾರ್ಚ್ 2024 ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಕಂಪನಿ ನಿರ್ಧರಿಸಿದೆ. ಸಿಗಂಧೂರು- ಕೊಲ್ಲೂರು- ಮಂಗಳೂರು ನಡುವೆ ಪ್ರಮುಖ ಸಂಪರ್ಕ ಕೊಂಡಿ ಈ ಸೇತುವೆ ಮೂಲಕ ಬೆಸೆದುಕೊಳ್ಳಲಿದ್ದು ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ.
ಮುಂದಿನ ವರ್ಷ ಲೋಕಾರ್ಪಣೆ
ಬಹುಬೇಡಿಕೆಯ ಕಳಸವಳ್ಳಿ- ಅಂಬಾರಗೊಡ್ಲುಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಪ್ರಮುಖ ಕೆಲಸ ಕಾರ್ಯಗಳು ಅಂತಿಮ ಘಟ್ಟ ತಲುಪಿದ್ದು ಉತ್ತಮ ಗುಣಮಟ್ಟದ ಕೆಲಸ ನಡೆಯುತ್ತಿದೆ. 2024ರಲ್ಲಿಸೇತುವೆ ಲೋಕಾರ್ಪಣೆಗೆ ಪ್ರಯತ್ನ ನಡೆಯುತ್ತಿದೆ. ಸಾಗರ ನಗರದ ಎನ್‌ಎಚ್ 206 ಹಾಗೂ ಬೈಂದೂರು- ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆಗೆ ಕೇಂದ್ರದಿಂದ 500ಕೋಟಿ ಮಂಜೂರಾತಿ ಆಗಿದೆ. ಸಾಗರ, ಸಿಗಂಧೂರು, ಕೊಲ್ಲೂರು- ಬೈಂದೂರು- ಮಂಗಳೂರು ನಡುವೆ ಹೊಸ ಹಾದಿ ತೆರೆದುಕೊಳ್ಳಲಿದ್ದು ಟೂರಿಸಂ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ