ಶಿಡ್ಲಘಟ್ಟದಲ್ಲಿ ಶಿವಯೋಗಿ ಸಿದ್ದರಾಮ ಜಯಂತಿ
1 min read
ಶಿಡ್ಲಘಟ್ಟದಲ್ಲಿ ಶಿವಯೋಗಿ ಸಿದ್ದರಾಮ ಜಯಂತಿ
ಸಿದ್ದರಾಮರ ಆದರ್ಶ ಪಾಲಿಸಲು ಶಾಸಕರ ಕರೆ
ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಿವಯೋಗಿ ಸಿದ್ದರಾಮ ಜಯಂತಿ ಇಂದು ಆಚರಿಸಲಾಯಿತು. ಶಾಸಕ ಬಿ.ಎನ್.ರವಿಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಿಡ್ಲಘಟ್ಟದಲ್ಲಿ ನಡೆದ ಶಿವಯೋಗಿ ಸಿದ್ದರಾಮ ಜಯಂತಿಯಲ್ಲಿ ಮಾತನಾಡಿದ ಶಾಸಕ ರವಿಕುಮಾರ್, ಶಿವಯೋಗಿ ಸಿದ್ದರಾಮೇಶ್ವರರು, ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದವರು. ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದರು. ಸಮಾಜ ಸುಧಾರಣೆ ಮತ್ತು ಬದಲಾವಣೆಗಾಗಿ 68 ಸಾವಿರ ವಚನ ರಚನೆ ಮಾಡಿ, ವಚನ ಕ್ರಾಂತಿ ಮಾಡಿದ್ದರು ಎಂದರು.
ಇವರ ಸಮಾಜಮುಖಿ ಬದುಕು ಯೌವ್ವನದಲ್ಲೆ ಪ್ರಾರಂಭವಾಗುತ್ತದೆ. ಸಿದ್ದರಾಮೇಶ್ವರರು ಸೊಲ್ಲಾಪುರದಲ್ಲಿ ಕೆರೆಯನ್ನು ಕಟ್ಟಿಸಿ, ಛತ್ರಗಳನ್ನು ಕಟ್ಟಿಸಿ, ಅನ್ನದಾನ ಮಾಡುತ್ತಾ ಜನರ ಕಂದಾಚಾರ ಮೌಢ್ಯಗಳನ್ನು ಪರಿಹರಿಸುತ್ತಾ ಅವರನ್ನು ಉದ್ಧರಿಸಲು ಪ್ರಯತ್ನಿಸಿದವರು. ಸಮುದಾಯದವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ತಹಶೀಲ್ದಾರ್ ಬಿ.ಎನ್. ಸ್ವಾಮಿ ಮಾತನಾಡಿ, ಸಮಾಜದ ಎಲ್ಲಾ ವರ್ಗಗಳ ಜನರು ಸಿದ್ದರಾಮೇಶ್ವರರ ಜೀವನ ವಿವರಗಳನ್ನು ತಿಳಿಯುವುದರಿಂದ, ಅವರ ವಚನಗಳನ್ನು ಅಧ್ಯಯನ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ೧೨ನೇ ಶತಮಾನಕ್ಕಿಂತ ಮುಂಚೆ ಆಳ್ವಿಕೆಯಲ್ಲಿದ್ದ ನೊಳಂಬ ರಾಜರು ಸಿದ್ಧರಾಮೇಶ್ವರರನ್ನು ಗುರುವೆಂದು ಸ್ವೀಕರಿಸಿದವರು. ಇಂದಿಗೂ ಆ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಅವರಲ್ಲಿದ್ದ ಆದರ್ಶಗಳು ಯುವಪೀಳಿಗೆಗೆ ಮಾದರಿಯಾಗಬೇಕು ಎಂದರು.
ಇದೇ ವೇಳೆ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲ್ಲೂಕು ಭೋವಿ ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಗೌರವಾಧ್ಯಕ್ಷ ಚಲಪತಿ, ಉಪಾಧ್ಯಕ್ಷ ರಾಜಪ್ಪ, ನಗರಸಭೆ ಸದಸ್ಯ ಸುರೇಶ್, ಬಂಕ್ ಮುನಿಯಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶಮೂರ್ತಿ ಇದ್ದರು.