ಬಾಗೇಪಲ್ಲಿ ನಿವಾಸಿಗಳಿಗೆ ತೀವ್ರವಾದ ನೀರಿನ ಬರ
1 min read
ಬಾಗೇಪಲ್ಲಿ ನಿವಾಸಿಗಳಿಗೆ ತೀವ್ರವಾದ ನೀರಿನ ಬರ
ಮತ್ತೊಂದೆಡೆ ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ ಕಡಿವಾಣ ಇಲ್ಲ
ಪುರಸಭೆ ನಿರ್ಲಕ್ಷದಿಂದ ನಾಗರಿಕರು ಹೈರಾಣ
ಬಾಗೇಪಲ್ಲಿ ಪಟ್ಟಣದ ಹಲವಾರು ಬಡವಾಣೆಗಳ ಜನತೆಗೆ ಐದಾರು ದಿನ ಕಳೆದರೂ ನೀರು ಸರಬರಾಜು ಮಾಡುತ್ತಿಲ್ಲ. ಕೆಲ ವಾರ್ಡ್ ಗಳಿಗೆ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ಅಲ್ಲಿನ ನಿವಾಸಿಗಳು ನೀರನ್ನು ಸಂಗ್ರಹಿಸುವುದನ್ನೆ ಕೆಲಸವಾಗಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ವಾರ ಕಳೆದರೂ ನೀರು ಬಾರದೆ ಸಂಕಷ್ಟ ಎದುರಿಸುವ ಜನ ಒಂದೆಡೆಯಾದರೆ, ನೀರು ಬಂದ ದಿನ ಅಡುಗೆ ಮಾಡುವುದನ್ನು ನಿಲ್ಲಿಸಿ, ನೀರು ಸಂಗ್ರಹಿಸುವ ಕೆಲಸದಲ್ಲಿ ತೊಡಗಬೇಕಾದ ಸ್ಥಿತಿ ಮತ್ತೊಂದು ಕಡೆ ಎದುರಾಗಿ ನಾಗರಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಇನ್ನು ಬೇಸಿಗೆ ಶುರುವಾದರೆ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಇದಕ್ಕೆ ಈಗನಿಂದಲೇ ನಾಗರಿಕರು ಸಿದ್ಧವಾಗಬೇಕಿದೆ.
ಪಟ್ಟಣದ 16ನೇ ವಾರ್ಡಿನ ಬಸ್ ನಿಲ್ದಾಣದ ಹಿಂಭಾಗದ ಓವರ್ ಹೆಡ್ ಟ್ಯಾಂಕ್ ಸಮೀಪ ಹಲವಾರು ತಿಂಗಳುಗಳಿ0ದ ಭಾರಿ ಪ್ರಮಾಣದ ನೀರು ಚರಂಡಿ ಪಾಲಾಗುತ್ತಿದೆ. ಈ ಕುರಿತು ಹಲವು ಬಾರಿ ಅಲ್ಲಿನ ನಾಗರೀಕರು ಸಂಬ0ಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇಂದು ಮುಂಜಾನೆ ರಭಸವಾಗಿ ಬಿದ್ದ ಮಳೆ ನೀರಿನಂತೆ ಭಾರಿ ಪ್ರಮಾಣದಲ್ಲಿ ಪಟ್ಟಣಕ್ಕೆ ಸರಬರಾಜಾಗಬೇಕಿದ್ದ ನೀರು, ರಸ್ತೆಯಗಲಕ್ಕೂ ಹರಿದು ಚರಂಡಿ ಪಾಲಾಗುತ್ತಿತ್ತು. ಇದು ನಿರಂತರವಾಗಿ ವ್ಯರ್ಥವಾಗುವ ಪ್ರಕ್ರಿಯಾಗಿದ್ದರೂ ಪೋಲಾಗುತ್ತಿರುವ ಜೀವಜಲ ಉಳಿಸುವ ಪ್ರಯತ್ನವನ್ನು ಪುರಸಭೆ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಾಲ್ಕು ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ. ನೀರು ಬಂದಾಗ ಕೆಲಸಗಳಿಗೆ ಹೋಗದೆ ರಜೆ ಹಾಕಿಕೊಂಡು ನೀರು ಸಂಗ್ರಹಿಸಿಕೊಳ್ಳಬೇಕು. ಇಲ್ಲವಾದರೆ ನಿತ್ಯ ಬಳಕೆಯ ನೀರಿಗೆ ಪರದಾಡಬೇಕು. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತಿರುವುದು ನೋವನ್ನುಂಟು ಮಾಡುತ್ತಿದೆ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಸಮೀಪದ ಓವರ್ ಹೆಡ್ ಟ್ಯಾಂಕ್ ಇದ್ದು, ನಿರಂತರವಾಗಿ ನೀರು ವ್ಯರ್ಥವಾಗುತ್ತಿರುವುದಕ್ಕೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಸೋಮಶೇಖರ್ ಆಕ್ರೋಶ ವ್ಯಕ್ತ ಪಡಿಸಿದ್ದು, ಪುರಸಭೆಯವರು ನೀರಿನ ವಿಚಾರದಲ್ಲಿ ಬೇಜಬ್ದಾರಿ ತೋರುತ್ತಿರುವುದು ಖಂಡನೀಯ ಎಂದರು.
ಹನಿಹನಿಗೂ ಪರಿತಪಿಸುವ ಬರದ ನಾಡಿದನಲ್ಲಿ ವ್ಯರ್ಥವಾಗಿ ಚರಂಡಿ ಪಾಲಾಗುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಇದನ್ನು ಸರಿಪಡಿಸದಿದ್ದರೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.