ಹಿರಿಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: ಮಾಜಿ ಕಾರು ಚಾಲಕ ಪೊಲೀಸ್ ವಶಕ್ಕೆ
1 min readಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಕೆ.ಎಸ್. ಹತ್ಯೆ ಪ್ರಕರಣ ಸಂಬಂಧ ಮಾಜಿ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೆ.ಎಸ್.(45) ಹತ್ಯೆ ಪ್ರಕರಣಕ್ಕೆ ಸಂಬಂಧ ಓರ್ವ ವ್ಯಕ್ತಿಯನ್ನು ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ಎಂಬಾತ ಸದ್ಯ ಪೊಲೀಸ್ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ.
ಹಲವು ವರ್ಷಗಳಿಂದ ಕಾರು ಚಾಲಕನಾಗಿದ್ದ ಕಿರಣ್ನನ್ನು ಇತ್ತೀಚಿಗೆ ಪ್ರತಿಮಾ ಕೆಲಸದಿಂದ ತೆಗೆದುಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಿರಣ್ನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಉತ್ತಮ ಅಧಿಕಾರಿಯಾಗಿದ್ದ ಪ್ರತಿಮಾ, ಇಲಾಖೆಗೆ ಸಂಬಂಧಿಸಿದಂತೆ ಕೆಲವೆಡೆ ದಾಳಿ ನಡೆಸಿ ದಿಟ್ಟತನ ಪ್ರದರ್ಶಿಸಿದ್ದರು. ಆದರೆ ಯಾವುದೇ ವೈರಿಗಳನ್ನೂ ಹೊಂದಿರಲಿಲ್ಲ. ಇಲಾಖೆಯಲ್ಲಿನ ನಿಯಮಗಳನುಸಾರ ಕರ್ತವ್ಯ ನಿರ್ವಹಿಸುತ್ತಾ ಉತ್ತಮ ಹೆಸರು ಸಂಪಾದಿಸಿದ್ದರು ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.
ಮನೆಗೆ ನುಗ್ಗಿ ಚಾಕು ಇರಿದು ಹತ್ಯೆಗೈದಿರುವ ಘಟನೆ ಶನಿವಾರ ರಾತ್ರಿ 8:30ರ ಸುಮಾರಿಗೆ ದೊಡ್ಡಕಲ್ಲಸಂದ್ರದ ಗೋಕುಲ ಅಪಾರ್ಟ್ಮೆಂಟಿನಲ್ಲಿ ನಡೆದಿತ್ತು. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಡ್ಕಿ ಮೂಲದ ಪ್ರತಿಮಾ ಅವರಿಗೆ ಭೂ ವಿಜ್ಞಾನ ಇಲಾಖೆಯಲ್ಲಿ ನೌಕರಿ ದೊರೆತಿದ್ದರಿಂದ ಬೆಂಗಳೂರಲ್ಲಿ ವಾಸಿಸುತ್ತಿದ್ದರು. ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲೇ ವಾಸವಿದ್ದರು. ಶನಿವಾರ ರಾತ್ರಿ 8 ಗಂಟೆಗೆ ಕಚೇರಿಯಿಂದ ಕಾರಿನಲ್ಲಿ ಪ್ರತಿಮಾ ಮನೆಗೆ ಆಗಮಿಸಿದ್ದರು. ಕಾರು ಚಾಲಕ ಡ್ರಾಪ್ ಮಾಡಿ ಮನೆಗೆ ತೆರಳಿದ್ದರು. ನಂತರ ಮನೆಗೆ ನುಗ್ಗಿ ಚಾಕು ಇರಿದು ಕೊಲೆ ಮಾಡಲಾಗಿತ್ತು.
ಪ್ರತಿಮಾ ಸಹೋದರ ರಾತ್ರಿ ಕರೆ ಮಾಡಿದರೂ ಫೋನ್ ರಿಸೀವ್ ಮಾಡಿರಲಿಲ್ಲ. ಇದರಿಂದ ಅನುಮಾನಗೊಂಡು ಅಪಾರ್ಟ್ಮೆಂಟ್ನ ಕೆಳಗಿನ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದರು. ಆಗ ಕೆಳಗಿನ ಮನೆಯವರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಮನೆಯಲ್ಲಿ ಏನೂ ಕಳ್ಳತನವಾಗಿಲ್ಲ. ಮನೆಗೆ ನುಗ್ಗಿ ಹತ್ಯೆಗೈದಿರುವುದರಿಂದ ಇದು ಪೂರ್ವನಿಯೋಜಿತ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆಯಿಂದ ಕೊಲೆಯ ಹಿಂದಿನ ನಿಜವಾದ ಕಾರಣ ತಿಳಿದುಬರಲಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದಾರೆ.