ಸ0ಸದ ಡಾ.ಕೆ. ಸುಧಾಕರ್ ಅಸಮಾಧಾನದಿಂದಲೇ ಪ್ರಕಟಣೆ
1 min readಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ
ಸ0ಸದ ಡಾ.ಕೆ. ಸುಧಾಕರ್ ಅಸಮಾಧಾನದಿಂದಲೇ ಪ್ರಕಟಣೆ
ಶಿಷ್ಟಾಚಾರ ಪಾಲಿಸದ ಕ್ರಮಕ್ಕೆ ಸಚಿವರ ವಿರುದ್ಧ ಅಸಮಾಧಾನ
ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರೊಂದಿಗೆ ಇನ್ನು ಮುಂದೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಸಂಸದ ಡಾ.ಕೆ. ಸುಧಾಕರ್ ಪ್ರಕಟಿಸಿದ್ದಾರೆ. ಶಿಷ್ಟಾಚಾರ ಪಾಲನೆ ಮಾಡದ ಕ್ರಮದ ಬಗ್ಗೆ ಅಸಮಾಧಾನ ಹೊರಹಾಕಿರುವ ಸಂಸದರು ಅಧಿಕೃತವಾಗಿ ಇನ್ನು ಮುಂದೆ ಉಸ್ತುವಾರಿ ಸಚಿವರ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡ ಹಾಗೂ ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆವಿ ನವೀನ್ ಕಿರಣ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಕೆವಿ ಕ್ಯಾಂಪಸ್‌ನಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದ್ದು, ಇಂದು ಸಂಸದ ಡಾ.ಕೆ.ಸುಧಾಕರ್ ಅವರು ಕೆವಿ ಕ್ಯಾಂಪಸ್‌ಗೆ ಆಗಮಿಸಿ ನವೀನ್ ಕಿರಣ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು, ಇನ್ನು ಮುಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಪ್ರಕಟಿಸಿದರು.
ಇತ್ತೀಚಿನ ಬೆಳವಣಿಗೆಗಳಿಂದ ತೀರ್ಮಾನ ಕೈಗೊಂಡಿದ್ದು, ಕೆಟ್ಟ ಮನಸ್ಥಿತಿ ಇರುವ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಅಧಿಕೃತವಾಗಿ ವೇದಿಕೆ ಹಂಚಿಕೊಳ್ಳುವುದು ಬೇಡವೆಂದು ತೀರ್ಮಾನಿಸಿರುವುದಾಗಿ ಅವರು ಹೇಳಿದರು. ಪ್ರಸ್ತುತ ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಾವು ಸಚಿವನಾಗಿದ್ದ ವೇಳೆ ಕ್ಷೇತ್ರ ಮತ್ತು ರಾಜ್ಯದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸುತ್ತಿದ್ದಾರೆ. ನಾನು ಏನು ಅಭಿವೃದ್ಧಿ ಮಾಡಿದ್ದೇ ಎನ್ನುವುದನ್ನು ಕಣ್ಣು ಬಿಟ್ಟು ನೋಡಲಿ ಎಂದು ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಅವರು ಅನುದಾನ ತಂದಿದ್ದರು. ಆದರೆ ಪ್ರಸ್ತುತ ಅವರು ಸಂಸದರಾಗಿದ್ದರೂ ಶಿಷ್ಟಾಚಾರದಂತೆ ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ನಿರ್ಲಕ್ಷ ಮಾಡಿರುವುದು ಸಂಸದರಿಗೆ ತೀವ್ರ ಅಸಮಾಧಾನ ತಂದಿದೆ ಎನ್ನಲಾಗಿದೆ.
ಇದೇ ಕಾರಣದಿಂದ ತೀವ್ರ ಬೇಸರ ವ್ಯಕ್ತಪಡಿಸಿರುವ ಸಂಸದ ಡಾ.ಕೆ. ಸುಧಾಕರ್ ಅವರು, ಇನ್ನು ಮುಂದೆ ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳ ವೇದಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಪ್ರಕಟಿಸಿದ್ದಾರೆ.