7ನೇ ವಾರ್ಡಿನ ನಿವಾಸಿಗಳಿಗೆ ನಿತ್ಯ ನರಕ ದರ್ಶನ
1 min read7ನೇ ವಾರ್ಡಿನ ನಿವಾಸಿಗಳಿಗೆ ನಿತ್ಯ ನರಕ ದರ್ಶನ
ಬಾಗೇಪಲ್ಲಿ ಪಟ್ಟಣದ ವಾಸಿಗಳಿಗಿಲ್ಲ ಮೂಲ ಸೌಕರ್ಯ
ಸ್ವಚ್ಛತೆ, ರಸ್ತೆ, ಚರಂಡಿ ಇಳ್ಲದೆ ತೀವ್ರ ಪರದಾಡುತ್ತಿರುವ ಜನ
ಬಾಗೇಪಲ್ಲಿ ತಾಲೂಕು ಬರಪೀಡಿತ ತಾಲೂಕಾಗಿ ಕುಖ್ಯಾತಿ ಪಡೆದಿದೆ. ಇದಕ್ಕೆ ಪೂರಕವಾಗಿ ಪಟ್ಟಣ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳಿಲ್ಲದೆ ನಾಗರಿಕರು ನಿತ್ಯ ನರಕ ಅನುಭಾವಿಸುವಂತಾಗಿದ್ದು, ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಲ್ಲಿ ಪುರಸಭೆ ವಿಲವಾಗಿರುವುದಕ್ಕೆ ಸಾರ್ವಜನಿಕರು ಪ್ರತಿನಿತ್ಯ ಶಾಪ ಹಾಕುತ್ತಿದ್ದಾರೆ.
ಬಾಗೇಪಲ್ಲಿ ಪಟ್ಟಣದ 7ನೇ ವಾರ್ಡಿನ ಡಾ. ಎಚ್ ಎನ್ ವೃತದಿಂದ ಕೊತ್ತಪಲ್ಲಿಗೆ ಸಂಪರ್ಕಿಸುವ ರಸ್ತೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ಸಂಚರಿಸುವ ಸ್ಥಳೀಯರು ಸೇರಿದಂತೆ ಇತರೆ ಪ್ರಯಾಣಿಕರು ಸರ್ಕಸ್ ಮಾಡಬೇಕಾದ ಸ್ಥಿತಿ ಎದುರಾಗಿದೆ. ಈ ರಸ್ತೆಯಲ್ಲಿ ಮೊಣಕಾಲುದ್ಧದ ಗುಂಡಿಗಳಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಅಲ್ಲದೆ ಇದೇ ರಸ್ತೆಯಲ್ಲಿ ಪ್ರತಿಷ್ಠಿತ ಶಾಲೆಯಿದ್ದು, ನಿತ್ಯವೂ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಜೊತೆಗೆ ಶುದ್ಧ ನೀರಿನ ಘಟಕ ಇದೇ ಮಾರ್ಗದಲ್ಲಿರುವುದರಿಂದ ಪಟ್ಟಣದ ಬಹುತೇಕ ಜನರು ನೀರಿಗಾಗಿ ಇದೇ ದಾರಿಯಲ್ಲಿ ಸಂಚರಿಸಬೇಕಿದೆ. ಸಾಲದೆಂಬ0ತೆ ಮಸೀದಿ ಮುಂಭಾಗದಲ್ಲಿ ಬೃಹತ್ ಹೊಂಡ ಆಗಿದ್ದು, ನೀರಿನ ಪೈಪ್ ನಿಂದ ನೀರು ಸೋರಿಕೆಯಾಗಿ ನಿತ್ಯವೂ ಕೆಸರು ಗದ್ದೆಯಂತಾಗಿರುತ್ತದೆ.
ಈ ವಾರ್ಡಿನ ಬಹಳಷ್ಟು ಮನೆಗಳು ತಗ್ಗಿನಲ್ಲಿದ್ದು, ಮಳೆ ಸುರಿದಾಗ ರಸ್ತೆಯ ಮೇಲೆಯೇ ಚರಂಡಿ ನೀರು ಹರಿಯುತ್ತದೆ. ಜೊತೆಗೆ ಪಟ್ಟಣದ ನ್ಯಾಷನಲ್ ಕಾಲೇಜ್ ಮತ್ತು ಗೂಳೂರು ರಸ್ತೆ ಮಾರ್ಗದಲ್ಲಿ ಬರುವ ಎಲ್ಲಾ ನೀರು ಮನೆಗಳಿಗೆ ನುಗ್ಗುತ್ತದೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ಸ್ಥಳೀಯ ನಾಗರಿಕರು ನರಕಾಯತನೆ ಪಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಸಂಬ0ಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ದುಸ್ಥಿತಿಯ ಬಗ್ಗೆ ಸಿಪಿಎಂ ತಾಲೂಕು ಕಾರ್ಯದರ್ಶಿ ಎಂ ಎನ್ ರಘುರಾಮರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ನಿತ್ಯವೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪೋಷಕರು ಓಡಾಡುವ ಜನದಟ್ಟನೆ ಪ್ರದೇಶವಾದ ಕೊತ್ತಪಲ್ಲಿ ರಸ್ತೆಯಲ್ಲಿ ಸಮರ್ಪಕ ಮೂಲ ಸೌಲಭ್ಯಗಳಿಲ್ಲ. ಗುಂಡಿಗಳಮಯ ರಸ್ತೆಯಿಂದಾಗಿ ಕಿರುಕುಳ ಒಂದೆಡೆಯಾದರೆ, ಮಾಂಸದ ಅಂಗಡಿಗಳ ತ್ಯಾಜ್ಯ, ಸಾರ್ವಜನಿಕರು ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯ ಚರಂಡಿ ಸೇರುತ್ತಿರುತ್ತದೆ. ಇಲ್ಲಿ ವೈನಿಕ ರೀತಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕೂಡಲೇ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡು, ಸುಸಜ್ಜಿತ ಚರಂಡಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.