ಆಧುನಿಕ ಅನುಭವ ಮಂಟಪ’ಕ್ಕೆ ರೂ.50 ಕೋಟಿ ಬಿಡುಗಡೆ – ಸಚಿವ ಈಶ್ವರ ಖಂಡ್ರೆ
1 min readಪ್ರಜಾಪ್ರಭುತ್ವದ ಹೆಗ್ಗುರುತಾದ ಸಂಸತ್ ಭವನಕ್ಕೆ ಮೂಲ ಪ್ರೇರಣೆಯಾಗಿರುವ 12ನೇ ಶತಮಾನದ ಶಿವಶರಣರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಆಧುನಿಕ ಅನುಭವ ಮಂಟಪ ಕಾಮಗಾರಿಯ ಮಾರ್ಚ್ ವರೆಗಿನ ಬಿಲ್ ಗಳನ್ನು ಪಾವತಿ ಮಾಡಲು, ಕಾಮಗಾರಿಗೆ ತ್ವರಿತ ಚಾಲನೆ ನೀಡಲು 50 ಕೋಟಿ ರೂ. ಬಿಡುಗಡೆ ಮಾಡುವಂತೆ ತಾವು ಮಾಡಿದ್ದ ಮನವಿಗೆ ಸ್ಪಂದಿಸಿ ತತ್ ಕ್ಷಣವೇ ಹಣ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಶ್ವರ ಖಂಡ್ರೆ ಧನ್ಯವಾದ ಅರ್ಪಿಸಿದ್ದಾರೆ.
ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡಬೇಕು ಎಂದು 2017ರಲ್ಲಿ ಪೌರಾಡಳಿತ ಸಚಿವರಾಗಿದ್ದಾಗ ತಾವು ಮಾಡಿದ್ದ ಮನವಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಅನುಮೋದನೆ ನೀಡಿ ಬಜೆಟ್ ನಲ್ಲಿ ಪ್ರಕಟಿಸಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಆಧುನಿಕ ಅನುಭವ ಮಂಟಪ ನಿರ್ಮಾಣ ಬೀದರ್ ಉಸ್ತುವಾರಿ ಸಚಿವರಾಗಿ ತಮ್ಮ ಕನಸಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಭವ್ಯ, ದಿವ್ಯ ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡಿ ಬಸವಕಲ್ಯಾಣವನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಮಾಡುವ ಆಶಯ ಹೊಂದಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.