ಕಚ್ಚಾ ರೇಷ್ಮೆ ಮಾರುಕಟ್ಟೆ ಸ್ಥಾಪಿಸಲು ರೀಲರ್‌ಗಳ ಒತ್ತಾಯ
1 min readಕಚ್ಚಾ ರೇಷ್ಮೆ ಮಾರುಕಟ್ಟೆ ಸ್ಥಾಪಿಸಲು ರೀಲರ್‌ಗಳ ಒತ್ತಾಯ
ಶಿಡ್ಲಘಟ್ಟ ರೇಷ್ಮೇ ಗೂಡಿನ ಮಾರುಟ್ಟೆಗೆ ಶಾಸಕರ ಭೇಟಿ
ರೀಲರುಗಳ ಕುಂದು ಕೊರತೆ ಸಭೆ ನಡೆಸಿದ ರವಿಕುಮಾರ್
ಶಿಡ್ಲಘಟ್ಟ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸೋಮವಾರ ಶಾಸಕ ಬಿ.ಎನ್.ರವಿಕುಮಾರ್ ಭೇಟಿ ನೀಡಿ, ರೀಲರುಗಳ ಸಮಸ್ಯೆಗಳನ್ನು ಆಲಿಸಿ, ಕುಂದುಕೊರತೆಗಳ ಸಭೆ ನಡೆಸಿದರು.
ಶಿಡ್ಲಘಟ್ಟ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸೋಮವಾರ ಶಾಸಕ ಬಿ.ಎನ್.ರವಿಕುಮಾರ್ ಭೇಟಿ ನೀಡಿ, ರೀಲರುಗಳ ಸಮಸ್ಯೆಗಳನ್ನು ಆಲಿಸಿ, ಕುಂದುಕೊರತೆಗಳ ಸಭೆ ನಡೆಸಿದರು. ಸಭೆಯಲ್ಲಿ ಸಿಲ್ಕ್ ರೀಲರ್ಸ್ ಪ್ರೊಡ್ಯೂಸರ್ಸ್ ಕಂಪೆನಿ ಅಧ್ಯಕ್ಷ ಫಾರುಕ್ ಮಾತನಾಡಿ, ರೈತರು ರೇಷ್ಮೆ ಗೂಡು ಮಾರುಕಟ್ಟೆಗೆ ತಂದು ಮಾರಿ ತಕ್ಷಣವೇ ಹಣ ಪಡೆದು ವಾಪಸಾಗುತ್ತಾರೆ. ಆದರೆ ರೀಲರುಗಳು ಮಧ್ಯವರ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿದ್ದೇವೆ. ನಾವು ಉತ್ಪಾದಿಸುವ ಕಚ್ಚಾ ರೇಷ್ಮೆಯನ್ನು ನೇರವಾಗಿ ಮಗ್ಗದವರಿಗೆ ಮಾರಿ ಹಣ ಪಡೆಯಲು ಅನುಕೂಲವಾಗುವ ಹಾಗೆ ಒಂದು ಕಚ್ಚಾ ರೇಷ್ಮೆಯ ಮಾರುಕಟ್ಟೆಯನ್ನು ಸ್ಥಾಪಿಸಬೇಕು. ರೇಷ್ಮೆ ಗೂಡಿಗೆ ಮಾರುಕಟ್ಟೆ ಇದ್ದ ಹಾಗೆ, ರೇಷ್ಮೆ ನೂಲಿಗೂ ಮಾರುಕಟ್ಟೆ ಬೇಕು. ಆಗ ಮಾತ್ರ ರೀಲರುಗಳು ಅಭಿವೃದ್ಧಿಯಾಗಲು ಸಾಧ್ಯ. ಇಲ್ಲವಾದರೆ ಈ ಉದ್ದಿಮೆ ಕ್ಷೀಣಿಸುತ್ತದೆ ಎಂದು ಹೇಳಿದರು.
ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, ರೀಲರುಗಳು, ರೈತರು ಮತ್ತು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಎಲ್ಲರಿಗೂ ಅನುಕೂಲವಾಗುತ್ತದೆ. ಅಧಿಕಾರಿಗಳು ಮೊದಲು ವೈಧೈ ಸಮಸ್ಯೆ ನಿವಾರಿಸಬೇಕು. ಅಕಸ್ಮಾತ್ ನಿಮ್ಮ ವ್ಯಾಪ್ತಿಗೆ ಅದು ಬರದಿದ್ದರೆ ನಿಮ್ಮ ಮೇಲಧಿಕಾರಿಗಳನ್ನು ಭೇಟಿ ಮಾಡೋಣ, ಸಂಬ0ಧಿಸಿದ ಸಚಿವರನ್ನು ಭೇಟಿ ಮಾಡೋಣ. ಮಾರುಕಟ್ಟೆಯಲ್ಲಿ ಸಮಸ್ಯೆಗಳು ಬಗೆಹರಿಯಬೇಕು. ಪ್ರತಿ ದಿನ ರೀಲರುಗಳು ಮತ್ತು ರೈತರಿಂದ ಒಂದರಿ0ದ ಎರಡು ಲಕ್ಷ ರೂ ಕಮಿಷನ್ ರೂಪದಲ್ಲಿ ಸಂಗ್ರಹವಾಗುತ್ತದೆ. ಆದರೂ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲ ಸೌಲಭ್ಯಗಳು ಇರದಿದ್ದರೆ ಹೇಗೆ. ಹೊರಗುತ್ತಿಗೆದಾರರಿಗೆ ಹಣ ಸಂದಾಯ ಮಾಡದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ರೀಲರುಗಳು ಮತ್ತು ರೈತರು ಕೋಟ್ಯಂತರ ರೂ ವ್ಯವಹಾರ ಮಾಡುತ್ತಾರೆ. ಒಂದು ಕೌಂಟರ್‌ನ್ನು ಮಾರುಕಟ್ಟೆಯಲ್ಲಿ ಸ್ಥಾಪಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಪಾರದರ್ಶಕವಾಗಿ ಜಾರಿಗೊಳಿಸಬೇಕು ಮತ್ತು ನಿಜವಾದ ಫಲಾನುಭವಿಗಳಿಗೆ ತಲುಪಬೇಕು ಎಂದು ಸೂಚಿಸಿದರು. ತಹಶೀಲ್ದಾರ್ ಬಿ.ಎನ್.ಸ್ವಾಮಿ, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಎನ್.ಮಹದೇವಯ್ಯ, ತಾಲ್ಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್, ಜಿ.ರೆಹಮಾನ್,
ಸಹಾಯಕ ನಿರ್ದೇಶಕ ತಿಮ್ಮರಾಜು, ಶ್ರೀಧರ್ ಇದ್ದರು.