ಜಿಲ್ಲೆಯಾದ್ಯಂತ ಡಿ.14 ರಂದು ರಾಷ್ಟಿಯ ಲೋಕ ಅದಾಲತ್
1 min readಜಿಲ್ಲೆಯಾದ್ಯಂತ ಡಿ.14 ರಂದು ರಾಷ್ಟಿಯ ಲೋಕ ಅದಾಲತ್
ನ್ಯಾ. ನೇರಳೆ ವೀರಭದ್ರಯ್ಯ ಭವಾನಿ ಅವರಿಂದ ಮಾಹಿತಿ
ಜಿಲ್ಲೆಯ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಇದ್ದು, ಇತ್ಯರ್ಥಪಡಿಸಲು ಅವಕಾಶವಿರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಕೀಲರು ಮತ್ತು ಕಕ್ಷಿದಾರರ ಸಹಕಾರದೊಂದಿಗೆ ಡಿಸೆಂಬರ್ 14 ರಂದು ನಡೆಯಲಿರುವ ಲೋಕ ಅದಾಲತ್‌ನಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಲಾಗುಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು, ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಅವರು ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ , ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಅವರು, ಡಿಸೆಂಬರ್ 14ರಂದು ರಾಷ್ಟಿಯ ಲೋಕ ಅದಾಲತ್ ನಡೆಯಲಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನಿರಂತರವಾಗಿ ರಾಜಿ ಪಂಚಾಯಿತಿ ಮೂಲಕ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿದೆ ಎಂದರು.
ರಾಷ್ಟಿಯ 4ನೇ ಲೋಕ ಅದಾಲತ್ ಆಯೋಜಿಸಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಈ ಬಾರಿ ಅದಾಲತ್‌ನಲ್ಲಿ ಜಿಲ್ಲಾ ನ್ಯಾಯಾಲಯ ಸೇರಿ ವಿವಿಧ ಹಂತದ ನ್ಯಾಯಾಲಯಗಳಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬ0ಧಿಸಿದ ಕ್ಲೇಮುಗಳು ಮುಂತಾದ ಪ್ರಕರಣಗಳನ್ನು ಕಕ್ಷಿದಾರರು ಹಾಗೂ ವಕೀಲರ ಸಹಕಾರದೊಂದಿಗೆ ಇತ್ಯರ್ಥಪಡಿಸಲಾಗುವುದು ಎಂದರು.
ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಸ್ವಯಂಪ್ರೇರಿತರಾಗಿ ಇತ್ಯರ್ಥಪಡಿಸಿಕೊಳ್ಳಲು ಮುಂದಾಗುವುದರಿ0ದ ಎರಡೂ ಕಡೆಯವರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುತ್ತದೆ. ಇಬ್ಬರ ನಡುವಿನ ಬಾಂಧವ್ಯ ಉಳಿದು ವಿವಾದ ಸುಖಾಂತ್ಯಗೊಳ್ಳುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನೂ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿರುತ್ತದೆ ಎಂದರು.
ಸದ್ಯ ಜಿಲ್ಲೆಯಲ್ಲಿ ಒಟ್ಟು 42,228 ಪ್ರಕರಣಗಳು ಬಾಕಿಯಿರುತ್ತವೆ, ಜೊತೆಗೆ 4,278 ಪ್ರಕರಣಗಳನ್ನು ಗುರುತಿಸಲಾಗಿದೆ. ಈಗಾಗಲೇ ರಾಜಿ ಮಾಡಿಕೊಂಡಿರುವ ಮತ್ತು ಇತ್ಯರ್ಥ ವರದಿ ಮಾಡಲು ಸಿದ್ದವಾಗಿರುವ ಪ್ರಕರಣಗಳ ಸಂಖ್ಯೆ 612 ಗುರ್ತಿಸಲಾಗಿದೆ. ಒಟ್ಟಾರೆ ಡಿಸೆಂಬರ್ 14ಕ್ಕೆ ಪ್ರಕರಣಗಳ ಸಂಖ್ಯೆ ಮತ್ತಷ್ಟು ಲಭ್ಯವಾಗುವ ಸಾಧ್ಯತೆ ಇದೆ. ಈ ಬಾರಿಯೂ ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಅದಾಲತ್‌ನಲ್ಲಿ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ಡಿಸೆ0ಬರ್ 14ರ ಅದಾಲತ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಸಾರ್ವಜನಿಕರು ಮುಂಚಿತವಾಗಿ ಸಂಬ0ಧಪಟ್ಟ ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಈ ವೇಳೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪ ಉಪಸ್ಥಿತರಿದ್ದರು.