ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ರಾಮಾಯಣ, ಮಹಾಭಾರತ ಸೇರಿಸಬೇಕು: NCERT ಸಮಿತಿ
1 min readಉನ್ನತ ಮಟ್ಟದ ಎನ್‌ಸಿಇಆರ್‌ಟಿ ಸಮಿತಿಯು ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು. ಸಂವಿಧಾನದ ಪೀಠಿಕೆಯನ್ನು ತರಗತಿಯ ಗೋಡೆಗಳ ಮೇಲೆ ಬರೆಯಬೇಕು ಎಂದು ಶಿಫಾರಸು ಮಾಡಿದೆ.
ನವದೆಹಲಿ: ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಸೇರಿಸಬೇಕು ಮತ್ತು ತರಗತಿಯ ಗೋಡೆಗಳ ಮೇಲೆ ಸಂವಿಧಾನದ ಪೀಠಿಕೆಯನ್ನು ಬರೆಯಬೇಕು ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ ಎಂದು ಸಮಿತಿ ಅಧ್ಯಕ್ಷ ಸಿ.ಐ.ಐಸಾಕ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ರಚಿಸಲಾದ ಏಳು ಸದಸ್ಯರ ಸಮಿತಿಯು ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಹಲವಾರು ಶಿಫಾರಸುಗಳನ್ನು ಮಾಡಿದೆ. ಇದು ನೂತನ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಅಭಿವೃದ್ಧಿಗೆ ಅಡಿಪಾಯ ಹಾಕುವ ಪ್ರಮುಖ ದಾಖಲೆಯಾಗಿದೆ. ಶಿಫಾರಸುಗಳ ಬಗ್ಗೆ ಎನ್‌ಸಿಇಆರ್‌ಟಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ತಿಳಿಸಿದರು.
“ಸಮಿತಿಯು ಸಮಾಜ ವಿಜ್ಞಾನ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು ಕಲಿಸಲು ಒತ್ತು ನೀಡಿದೆ. ಹರೆಯದಲ್ಲಿ ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ, ದೇಶಭಕ್ತಿ ಮತ್ತು ರಾಷ್ಟ್ರದ ಬಗ್ಗೆ ಹೆಮ್ಮೆ ಬೆಳೆಸುವುದು ಮುಖ್ಯ. ದೇಶಪ್ರೇಮದ ಕೊರತೆಯಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ದೇಶ ಬಿಟ್ಟು ಬೇರೆ ದೇಶಗಳಲ್ಲಿ ಪೌರತ್ವ ಪಡೆಯುತ್ತಿದ್ದಾರೆ. ಆದ್ದರಿಂದ, ಅವರು ತಮ್ಮ ಮೂಲದವನ್ನು ಅರ್ಥಮಾಡಿಕೊಳ್ಳುವುದು ಮತ್ತು ದೇಶ, ಸಂಸ್ಕೃತಿಯ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಮುಖ್ಯ” ಎಂದು ಐಸಾಕ್ ಹೇಳಿದರು.
“ಕೆಲವು ಮಂಡಳಿಗಳು ಈಗಾಗಲೇ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸುತ್ತಿವೆ. ಆದರೆ, ಅದನ್ನು ಹೆಚ್ಚು ವಿಸ್ತಾರವಾದ ರೀತಿಯಲ್ಲಿ ಕಲಿಸುವ ಪ್ರಯತ್ನ ಮಾಡಬೇಕು. ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಎಂಬ ದೇಶದ ಹೆಸರನ್ನು ‘ಭಾರತ’ ಎಂದು ಬದಲಿಸಲು ಮತ್ತು ಪ್ರಾಚೀನ ಇತಿಹಾಸದ ಬದಲಿಗೆ ಶಾಸ್ತ್ರೀಯ ಇತಿಹಾಸವನ್ನು ಪರಿಚಯಿಸಲು ಹಾಗೂ 3 ರಿಂದ 12ನೇ ತರಗತಿಗಳ ಪಠ್ಯಪುಸ್ತಕಗಳಲ್ಲಿ ಹಿಂದೂ ವಿಜಯಗಳನ್ನು ಎತ್ತಿ ತೋರಿಸಲು ಶಿಫಾರಸು ಮಾಡಿದೆ” ಎಂದು ಐಸಾಕ್ ಮಾಹಿತಿ ನೀಡಿದರು.
ಎನ್‌ಸಿಇಆರ್‌ಟಿ 10, 11, 12ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ
“ನಮ್ಮ ಸಂವಿಧಾನದ ಪೀಠಿಕೆಯು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಸೇರಿದಂತೆ ಸಾಮಾಜಿಕ ಮೌಲ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಇದು ಉದಾತ್ತವಾಗಿದೆ. ಆದ್ದರಿಂದ, ತರಗತಿಯ ಗೋಡೆಗಳ ಮೇಲೆ ಅದನ್ನು ಬರೆಯಲು ನಾವು ಶಿಫಾರಸು ಮಾಡಿದ್ದೇವೆ, ಇದರಿಂದ ಪ್ರತಿಯೊಬ್ಬರೂ ಸಂವಿಧಾನವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಕಲಿಯಬಹುದು” ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಕ್ಕೆ ಅನುಗುಣವಾಗಿ ಎನ್‌ಸಿಇಆರ್‌ಟಿ ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸುತ್ತಿದೆ. ನೂತನ NCERT ಪಠ್ಯಪುಸ್ತಕಗಳು ಮುಂದಿನ ಶೈಕ್ಷಣಿಕ ಅವಧಿಗೆ ಸಿದ್ಧವಾಗುವ ಸಾಧ್ಯತೆಯಿದೆ. ತರಗತಿಗಳಿಗೆ ಪಠ್ಯಕ್ರಮ, ಪಠ್ಯಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಅಂತಿಮಗೊಳಿಸಲು ಜುಲೈನಲ್ಲಿ ಸೂಚಿಸಲಾದ 19-ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿಯು (NSTC) NCERT ಸಮಿತಿಯ ಶಿಫಾರಸುಗಳನ್ನು ಈಗ ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.