ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ ಎಲ್ಲೆಲ್ಲೂ ರಾಮನಾಮ ಜಪ
1 min readಎಲ್ಲೆಲ್ಲೂ ರಾಮನಾಮ ಜಪ , ಜಗವೆಲ್ಲಾ ರಾಮಮಯ ,ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೆಕ, ದೇವಾಲಯಗಳಲ್ಲಿ ವಿಶೇಷ ಪೂಜೆ , ಹೋಮ, ಹವನ, ಮುಗಿಲು ಮುಟ್ಟಿದ ರಾಮಜಪ
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೋಟ್ಯಂತರ ಜನ, ಶತಕಗಳ ಕನಸು, ದಶಕಗಳ ಹೋರಾಟ ನನಸಾದ ಕ್ಷಣ, ಅಯೋಧ್ಯೆಯಲ್ಲಿ ರಾಮ ಪಟ್ಟಾಭಿಷೇಕದ ಸುಂದರ ಕ್ಷಣ, ಮರಳಿ ಬಂದ ರಾಮನಿಗಾಗಿ ಕಾದು ಕುಳಿತ ಕೋಟ್ಯಂತರ ಶಬರಿಗಳಿಗೆ ದರ್ಶನ ಭಾಗ್ಯ ದೊರೆತ ಕ್ಷಣ ಅದುವೇ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಅಮುಲ್ಯ ಕ್ಷಣ.
ಹೌದು, ಕೋಟ್ಯಂತರ ಹೃದಯ ಮಿಡಿತ ಪುಳಕಿತವಾಗಿದೆ. ನುರಾರು ವರ್ಷಗಳ ಕನಸು ನನಸಾಗಿದೆ, ಶತಕೋಟಿ ದಾಟಿದ ಹಿಂದೂಗಳ ಕಣ್ಣು ಆನಂದ ಭಾಷ್ಪದಿಂದ ಒದ್ದೆಯಾಗಿದೆ, ಆನಂದದ ಅತಿರೇಕದಿಂದ ಮೈ ಕಂಪಿಸುತ್ತಿದೆ. ನಮ್ಮ ಕಾಲದಲ್ಲಿ ರಾಮನ ಪ್ರತಿಷ್ಠಾಪನೆಯಾದ ಸಾರ್ಥಕತೆ ಪ್ರತಿಯೊಬ್ಬರಲ್ಲೂ ಮನೆ ಮಾಡಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಭಾರತ ಮಾತ್ರವಲ್ಲ ಜಗತ್ತೇ ರಾಮಮಯವಾಗಿದೆ. ಹಾಗೆಯೇ ಚಿಕ್ಕಬಳ್ಳಾಪುರ ಜಿಲ್ಲೆಯೂ ಸಂಪೂರ್ಣ ರಾಮಜಪದಿಂದ ಆವೃತವಾಗಿದೆ.
ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೂವಿನ ಅಲಂಕಾರ, ಹೋಮಗಳನ್ನು ಹಮ್ಮಿಕೊಳ್ಳಲಾಗಿದೆ.
ಚಿಕ್ಕಬಳ್ಳಾಪುರದ ಕೋದಂಡ ರಾಮ ಸ್ವಾಮಿ ದೇವಾಲಯದಲ್ಲಿ ಹೂವಿನ ಅಲಂಕಾರ ಮಾಡಿ ಶ್ರೀ ರಾಮನ ವಿಗ್ರಹಕ್ಕೆ ವಿಶೇಷ ಅಭಿಷೇಕ, ಪೂಜೆ, ಹೂವಿನ ಅಲಂಕಾರ, ಹೋಮ ಮಾಡುವ ಮೂಲಕ ವಿಶೇಷ ಕಾರ್ಯಕ್ರಮಗಳು ನಡೆದವು. ದೇವಾಲಯಗಳಿಗೆ ಬರುವ ಭಕ್ತಾಧಿಗಳಿಗೆ ಪ್ರಸಾದ, ಪಾನಕ, ಹೆಸರುಬೇಳೆ, ಪ್ರಸಾದ ವಿತರಿಸಲಾಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀ ರಾಮನ ಪಲ್ಲಕ್ಕಿಯನ್ನು ಹೊತ್ತು ಮೆರವಣಿಗೆ ಮಾಡಲಾಯಿತು. ಈ ವೇಳೆ ಶ್ರೀ ರಾಮನ ಮಹಿಳಾ ಭಕ್ತರು ಕೆಂಪು ಸೀರೆ ಉಟ್ಟಿಕೊಂಡು ಕೈಯಲ್ಲಿ ಭಾಗವದ್ವಜ ಹಿಡಿದು ಜೈ ಶ್ರೀ ರಾಮ್ ಎಂದು ರಸ್ತೆಯ ಉದ್ದಕ್ಕೂ ಘೋಷಣೆಗಳೊಂದಿಗೆ ತೆರಳಿದರು.
ನಗರದ ಜಾಲಾರಿ ಗಂಗಮ್ಮ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ, ಪೂಜೆ ನಡೆಸಲಾಯಿತು. ಈ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಶಿಕ್ಷಕ ಸತೀಶ್ ಶ್ರೀ ರಾಮ ಮಂದಿರವನ್ನು ಥರ್ಮಾಕೋಲಿನಲ್ಲಿ ನಿರ್ಮಿಸಿ ಭಕ್ತರಿಗೆ ಪ್ರದರ್ಶನಕ್ಜೆ ಇಟ್ಟಿದ್ದರು.
ಶ್ರೀ ರಾಮಮಂದಿರ ನಿರ್ಮಾಣ ಶತಮಾನಗಳಿಂದ ಹಿಂದೂಗಳ ಕನಸಾಗೆ ಉಳಿದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ದೇಶದ ಹಿಂದೂಗಳ ಪುಣ್ಯ ಎಂದೇ ವರ್ಣಿಸಲಾಗುತ್ತಿದೆ. ಶ್ರೀ ರಾಮನ ಮಂದಿರಕ್ಕಾಗಿ ಹೋರಾಟಗಳು ನಡೆದು, ಹಲವಾರು ರಾಮಭಕ್ತರು ಪ್ರಾಣತ್ಯಾಗ ಮಾಡಿದ್ದಾರೆ. ಈಗ ಪ್ರಾಣ ತ್ಯಾಗ ಮಾಡಿದ ಎಲ್ಲ ಕರ ಸೇವಕರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುತ್ತಾರೆ ರಾಮಭಕ್ತರು.
ಇನ್ನು ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯ, ನಂದಿ ಬೆಟ್ಟದ ಯೋಗ ನಂದೀಶ್ವರ ದೇವಾಲಯ, ಬಿಜಿಎಸ್ ಕಾಲೇಜು ಬಳಿಯ ಬಯಲಾಂಜನೇಯ ಸ್ವಾಮಿ ದೇವಾಲಯ, ಸೇರಿದಂತೆ ಜಿಲ್ಲೆಯ ಎಲ್ಲ ದೇವಾಲಯಗಲಲ್ಲಿಯೂ ವಿಶೇಷ ಪೂಜೆಗಳು, ಹೋಮ, ಹವನ, ಅಲಂಕಾರಗಳು ನಡೆದಿವೆ.
ಬಾಗೇಪಲ್ಲಿ ತಾಲೂಕಿನ ಕದಿರನ್ನಗಾರಿಪಲ್ಲಿ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ. ಗ್ರಾಮದ ಪ್ರವೇಶ ದ್ವಾರದಲ್ಲಿರುವ ಮಹಾದ್ವಾರಕ್ಕೆ ಮತ್ತು ಗ್ರಾಮದಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿನ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕ ನೆರವೇರಿಸಲಾಯಿತು.