ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ
1 min read
ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ
ರಾಮನೇ ಲಿಂಗ ಪ್ರತಿಷ್ಠಾಪಿಸಿದ ಐತಿಹ್ಯವಿರುವ ಕ್ಷೇತ್ರ
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ ಪುಷ್ಯ ಶುಕ್ಲ ಪಕ್ಷ ಪೌರ್ಣಮಿ ಸೋಮವಾರ ವಿಜೃಂಭಣೆಯಿ0ದ ಆಚರಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳೂ ಸೇರಿದಂತೆ ದೂರದೂರುಗಳಿಂದ ಸಾವಿರಾರು ಮಂದಿ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು. ಬ್ರಹ್ಮರಥೋತ್ಸವಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಹಾಗೂ ತಹಶೀಲ್ದಾರ್ ಬಿ.ಎನ್ ಸ್ವಾಮಿ ಚಾಲನೆ ನೀಡಿದರು.
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಿ ನಂತರ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರು ರಥವನ್ನು ದೇವಸ್ಥಾನದ ಹೊರಭಾಗದ ಸುತ್ತ ಜಯ ಘೋಷ ಕೂಗುತ್ತಾ ಎಳೆದರು. ನೆರೆದಿದ್ದ ಭಕ್ತರು ರಥದ ಮೇಲೆ ಬಾಳೆ ಹಣ್ಣು ಎಸೆದು ಭಕ್ತಿಯಿಂದ ನಮಿಸಿದರು. ತಾಲ್ಲೂಕಿನ ವಿವಿದೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಶಾಸಕ ಬಿ.ಎನ್ ರವಿಕುಮಾರ್ ಮಾತನಾಡಿ, ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವುದು ಅಪರೂಪ. ದೇಶದ ದಕ್ಷಿಣದ ತುತ್ತ ತುದಿಯಲ್ಲಿ ರಾವಣನೊಂದಿಗೆ ಯುದ್ಧಕ್ಕೆ ತೆರಳುವ ಮುಂಚೆ ರಾಮನು ಶಿವನನ್ನು ಪೂಜಿಸಿದ ಕ್ಷೇತ್ರ ರಾಮೇಶ್ವರವಾಗಿದ್ದರೆ, ತಾಲ್ಲೂಕಿನಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿರುವ ಕ್ಷೇತ್ರ ರಾಮಲಿಂಗೇಶ್ವರವೆ0ದೇ ಪ್ರಸಿದ್ಧವಾಗಿದೆ. ಇದು ಪವಿತ್ರವಾದ ಕ್ಷೇತ್ರ. ಕ್ಷೇತ್ರದ ಜನರಿಗೆ ದೇವರ ಆಶೀರ್ವಾದವಿರಲಿ ಎಂದು ಹೇಳಿದರು.
ಬ್ರಹ್ಮರಥೋತ್ಸವಕ್ಕೆ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಸಾಕಷ್ಟು ದೂರಕ್ಕೇ ಕಾಣಬಲ್ಲ ಅತಿ ಎತ್ತರವಾದ ಧ್ವಜ ಸ್ತಂಭ, ದೊಡ್ಡದಾದ ಏಕಶಿಲಾ ಬಸವಣ್ಣ ಈ ದೇವಾಲಯದ ವೈಶಿಷ್ಟ. ಬೇರೆಲ್ಲಿಯೂ ಕಾಣಸಿಗದ ಹನುಮಲಿಂಗ ದೇವಾಲಯವೂ ಇಲ್ಲಿದೆ. ರಾಮದೊಣೆ, ಲಕ್ಷಣದೊಣೆ ಮತ್ತು ಸೀತಾದೊಣೆಗಳೆಂಬ ನೀರಿನ ಸೆಲೆಗಳಾದ ದೊಣೆಗಳಿಲ್ಲಿವೆ. ಇವುಗಳಲ್ಲಿ ಸದಾ ನೀರು ತುಂಬಿರುತ್ತವೆ. ಅವುಗಳನ್ನು ರಾಮ ನಿರ್ಮಿಸಿದ್ದನೆಂಬ ಪ್ರತೀತಿಯಿದೆ. ಭಕ್ತರು ಅವುಗಳಿಂದ ನೀರನ್ನು ಮೊಗೆದು ತಲೆಗೆ ಸಿಂಪಡಿಸಿಕೊಳ್ಳುತ್ತಿದ್ದರು.