ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ
1 min readಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಬಿಜೆಪಿಯಿಂದ ಬೃಹತ್ ಹೋರಾಟ
ಮುಡಾ ಹಗರದ ರೂವಾರಿಯೇ ಸಿದ್ದರಾಮಯ್ಯ ಎಂದು ಆರೋಪ
ಕೂಡಲೇ ಸಿದ್ದರಾಮಯ್ಯ ರಾಜಿನಾಮೆಗೆ ಪಟ್ಟು
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇರುವ ಜೊತೆಗೆ, ಸಾವಿರಾರು ಕೋಟಿ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜಿನಾಮೆ ನೀಡಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ಚಿಕ್ಕಬಳ್ಳಾಪುರದಲ್ಲಿ ಇಂದು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯ ಕೂಡಲೇ ರಾಜಿನಾಮೆ ನೀಡಲು ಒತ್ತಾಯಿಸಿದರು.
ಚಿಕ್ಕಬಳ್ಳಾಪುರದಲ್ಲಿ ಇಂದು ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲಾಧ್ಯಕ್ಷ ರಾಮಲಿಂಗಪ್ಪ, ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಎಸ್‌ಆರ್‌ಎಸ್ ದೇವರಾಜ್, ಬಾಲು ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಸಿದ್ದರಾಮಯ್ಯ ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ, ಪ್ಲಕಾರ್ಡ್ ಹಿಡಿದು ನಗರದ ಶಿಡ್ಲಘಟ್ಟ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಕೆಲ ಕಾಲ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ನಂತರ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಎಮ್ಮೆಯೊಂದಿಗೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರ ಜಡ್ಡುಗಟ್ಟಿದೆ. ಎಮ್ಮೆಯಂತೆ ರಾಜಿನಾಮೆ ನೀಡದೆ ಮುಖ್ಯಮಂತ್ರಿಗಳು ಕುರ್ಚಿಗೆ ಅಂಟಿಕೊ0ಡು ಕುಳಿತಿದ್ದಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೂ ಅಧಿಕಾರ ಬಿಟ್ಟುಕೊಡದೆ ಮೊಂಡುತನ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಮುಡಾ ಹಗರಣ ಸಂಬ0ಧ ರಾಜ್ಯ ಉಚ್ಛ ನ್ಯಾಯಾಲಯ ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದಿದೆ. ಅಲ್ಲದೆ ಸಿದ್ದರಾಮಯ್ಯ ಅವರ ಅರ್ಜಿಯನ್ನು ತಿರಸ್ಕರಿಸುವ ಜೊತೆಗೆ ಮುಖ್ಯಮಂತ್ರಿಗಳ ಕುಟುಂಬ ಫಲಾನುಭವಿಗಳಾಗಿರುವ ಕಾರಣ ಹಗರಣದಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪವಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡಿ, ಕೂಡಲೇ ರಾಜಿನಾಮೆ ಸಲ್ಲಿಸಬೇಕು, ನಂತರ ಕಾನೂನು ಹೋರಾಟ ಮುಂದುವರಿಸಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಒತ್ತಾಯಿಸಿದರು.
ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಮಲಿಂಗಪ್ಪ, ಸಾವಿರಾರು ಕೋಟಿ ಹಗರಣ ಮುಡಾದಲ್ಲಿ ನಡೆದಿದೆ. ಇದರಲ್ಲಿ ಮುಖ್ಯಮಂತ್ರಿಗಳ ಕೈವಾಡ ಇದೆ ಎಂಬುದಕ್ಕೆ ನ್ಯಾಯಾಲಯದ ಆದೇಶವೇ ನಿದರ್ಶನವಾಗಿದೆ. ಹಾಗಿದ್ದರೂ ಮುಖ್ಯಮಂತ್ರಿಗಳು ಕುರ್ಚಿಗೆ ಅಂಟಿಕೊ0ಡು ಅಧಿಕಾರ ಬಿಟ್ಟುಕೊಡುತ್ತಿಲ್ಲ. ಹಾಗಾಗಿ ಬಿಜೆಪಿ-ಜೆಡಿಎಸ್ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದುಒತ್ತಾಯಿಸಲಾಗುತ್ತಿದೆ ಎಂದರು.
ಅಲ್ಲದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಬೆಂಗಳೂರಿನಿAದ ಮೈಸೂರಿಗೆ ಪಾದಯಾತ್ರೆ ನಡೆಸಲಾಗಿದೆ. ವಾಲ್ಮೀಕಿ ಹಗರಣ ಸೇರಿದಂತೆ ಹಲವು ಹಗರಣಗಳು ರಾಜ್ಯ ಸರ್ಕಾರದ ಸಾಧನೆಗಳಾಗಿವೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತವಾಗಿದ್ದು, ಕೇವಲ ಅಧಿಕಾರ ಕಾಪಾಡಿಕೊಳ್ಳಲು ಹಗರಣಗಳಲ್ಲಿ ನಾಯಕರು ತೊಡಗಿದ್ದಾರೆ. ಇಂತಹ ದುರ್ಷ್ಟ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ರಾಮಲಿಂಗಪ್ಪ ಒತ್ತಾಯಿಸಿದರು.
ನಂತರ ಮಾತನಾಡಿದ ಎಸ್‌ಆರ್‌ಎಸ್ ದೇವರಾಜ್, ಕಾಂಗ್ರೆಸ್ ನಾಯಕರು ಹಗರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಅಂಟಿಕೊ0ಡು ತಮ್ಮ ವಿರುದ್ಧದ ಆರೋಪಗಳಿಗೆ ಸಮರ್ಪಕ ಉತ್ತರ ನೀಡದೆ ರಾಜಿನಾಮೆ ನೀಡುವುದಿಲ್ಲ ಎಂದು ಹುಂಬುತನ ತೋರುತ್ತಿದ್ದಾರೆ. ಈ ಸರ್ಕಾರ ಭ್ರಷ್ಟ ಸರ್ಕಾರ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ಸೇರಿದಂತೆ ಹಲವು ಹಗರಣಗಳು ಈ ಸರ್ಕಾರದ ಒಂದೂವರೆ ವರ್ಷದ ಅವಧಿಯಲ್ಲಿ ನಡೆದಿದ್ದು, ಭ್ರಷ್ಟಾಚಾರಗಳು ಬಯಲಾಗುತ್ತಿದ್ದರೂ ಯಾವುದೇ ನೈತಿಕತೆ ಇಲ್ಲದೆ ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಮುಂದುವರಿಯುತ್ತಿರುವುದು ವಿಪರ್ಯಾಸ ಎಂದು ದೇವರಾಜ್ ಹೇಳಿದರು. ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ ಕೂಡಲೇ ರಾಜಿನಾಮೆ ನೀಡಬೇಕು, ರಾಜ್ಯದಲ್ಲಿ ಸಿಎಂಗೆ ಎಮ್ಮೆಗೆ ಇರುವ ಮರ್ಯಾಸೆಯೂ ಇಲ್ಲವಾಗಿದೆ. ಕಾಂಗ್ರೆಸ್ ಸರ್ಕಾರ ೪೨೦ ಸರ್ಕಾರ ಆಗಿದೆ. ಅದರಲ್ಲಿ ಎಲ್ಲರು ಭ್ರಷ್ಟರಾಗಿ, ಎಲ್ಲರು ಮೋಸ ಮಾಡುತ್ತಿದ್ದಾರೆ. ರಾಜೀನಾಮೆ ಕೊಡದಿದ್ದರೆ ರಾಜ್ಯದ ಜನತೆ ದಂಗೆ ಏಳುತ್ತಾರೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲಾಧ್ಯಕ್ಷ ರಾಮಲಿಂಗಪ್ಪ, ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಎಸ್‌ಆರ್‌ಎಸ್ ದೇವರಾಜ್, ಬಾಲು ಸೇರಿದಂತೆ ಇತರರು ಭಾಗವಹಿಸಿದ್ದರು.