ಗ್ರಾಮ ಠಾಣಾ ಜಾಗಗಳ ಒತ್ತುವರಿ ತೆರುವಿಗೆ ಆಗ್ರಹಿಸಿ ಪ್ರತಿಭಟನೆ
1 min read
ಗ್ರಾಮ ಠಾಣಾ ಜಾಗಗಳ ಒತ್ತುವರಿ ತೆರುವಿಗೆ ಆಗ್ರಹಿಸಿ ಪ್ರತಿಭಟನೆ
ದಲಿತರಿಗೆ ನಿವೇಶನ ನೀಡದೆ ಮೋಸ ಮಾಡುತ್ತಿರುವ ಅಧಿಕಾರಿಗಳು
ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ವಿವಿಧ ಗ್ರಾಪಂಗಳ ವ್ಯಾಪ್ತಿಯ ಗ್ರಾಮ ಠಾಣಾ ಜಾಗವನ್ನು ಕಬಳಿಕೆ ಮಾಡಿ, ಖಾಸಗಿ ವ್ಯಕ್ತಿಗಳ ಹೆಸರಲ್ಲಿ ಖಾತೆ ಮಾಡಲಾಗಿದೆ. ಹಲವು ವರ್ಷಗಳಿಂದ ಅನುಭವದಲ್ಲಿರುವ ದಲಿತರ ಜಾಗಗಳನ್ನು ಒತ್ತುವರಿ ಮಾಡಿ ಬೇರೆಯವರಿಗೆ ಖಾತೆ ಮಾಡಿಕೊಡಲಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಭ್ರಷ್ಟ ಅಧಿಕಾರಿಗಳನ್ನ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ಆವರಣದಲ್ಲಿ ಧರಣಿ ಕುಳಿತ ಕಾರ್ಯಕರ್ತರು, ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಿ ವಿ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ತಾಲೂಕು ಹಾರೋಬಂಡೆ ಗ್ರಾಮ ಪಂಚಾಯಿತಿಯ ಜಡೇನಹಳ್ಳಿಯ ಗ್ರಾಮ ಠಾಣದಲ್ಲಿ ದಲಿತರಿಗೆ ನಿವೇಶನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಈಗಾಗಲೇ ಹಂಚಿಕೆಯಾಗಿರುವ ಹೌಸ್ ಲಿಸ್ಟ್ಗಳನ್ನು ವಜಾಗೊಳಿಸಿ, ದಲಿತರಿಗೆ ಸೂಕ್ತ ನಿವೇಶನ ಹಂಚಿಕೆ ಮಾಡಬೇಕು. ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಕಳೆದ ೪೦ ವರ್ಷಗಳಿಂದ ಅನುವದಲ್ಲಿರುವ ದಲಿತರ ಜಾಗಕ್ಕೆ ಗ್ರಾಪಂ ಅಧಿಕಾರಿಗಳು ಮತ್ತು ಸದಸ್ಯರು ನಕಲಿ ದಾಖಲೆ ಸೃಷ್ಟಿಸಿ, ಪಕ್ಕದ ಊರಿನವರಿಗೆ ಇ ಖಾತೆ ಮಾಡಿಕೊಡಲಾಗಿದೆ. ಜಡೇನಹಳ್ಳಿ ಗ್ರಾಮದ ಮನೆ ಸಂಖ್ಯೆ ೨೫ ಗ್ರಾಮಠಾಣ ಜಾಗವಾಗಿದ್ದು, ಸದರಿ ಜಾಗವನ್ನು ಏರ್ಟೆಲ್ ಟವರ್ಗೆ ಬಾಡಿಗೆ ಕೊಡಲಾಗಿದೆ. ಖಾಸಗಿ ವ್ಯಕ್ತಿಗಳು ಬಾಡಿಗೆ ಮತ್ತು ಮುಂಗಡ ಹಣ ಪಡೆದಿದ್ದಾರೆ. ಇದರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದರು.
ತಾಲೂಕಿನ ಆವಲಗುರ್ಕಿ ಗ್ರಾಪಂ ವ್ಯಾಪ್ತಿಯ ಸ.ನಂ ೧೩೭ರಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲಾಗಿದ್ದು, ೨೧ ಮಂದಿ ದಲಿತರಿಗೆ ಮನೆ ನಿರ್ಮಿಸಿಕೊಡದೆ ಅನ್ಯಾಯ ಮಾಡಲಾಗಿದೆ. ಈ ರೀತಿ ತಾಲೂಕಿನ ಹಲವೆಡೆ ದಲಿತರಿಗೆ ಅನ್ಯಾಯವಾಗುತ್ತಿದ್ದು, ಸಂಬAಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ತಿಮ್ಮರಾಜು, ಕೃಷ್ಣಪ್ಪ, ರಾಜು, ಪ್ರಧಾನ ಕಾರ್ಯದರ್ಶಿ ಸಾದಲಿ ಮಂಜುನಾಥ್, ನರಸಿಂಹಮೂರ್ತಿ, ಶ್ರೀನಿವಾಸ್, ಜ್ಯೋತಿ, ಸುಜಾತ, ಎಚ್.ವಿ. ವೆಂಕಟೇಶ್, ಭಾರತಿ, ಲಲಿತ, ಸಾಜನ್, ನಾರಾಯಣಸ್ವಾಮಿ ಇದ್ದರು.