ರಾಜ್ಯ ಸರ್ಕಾರದಿಂದ ದರೋಡೆಕೋರರ ರಕ್ಷಣೆ: ಹೆಚ್.ಡಿ.ಕುಮಾರಸ್ವಾಮಿ
1 min readಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಕುರಿತ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ನಡೆಗೆ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.
ದರೋಡೆಕೋರರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ನಿಂತಿದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಇಂದು ಬೆಳಿಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ತನಿಖೆಗಾಗಿ ಸಿಬಿಐಗೆ ನೀಡಿದ್ದ ಅನುಮತಿಯನ್ನು ಸರ್ಕಾರ ವಾಪಸ್ ಪಡೆದ ವಿಚಾರಕ್ಕೆ ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಈ ಸರ್ಕಾರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾತನಾಡುವುದು ಬಹಳ ಇದೆ. ಚರ್ಚೆ ಮಾಡೋಣ, ಇದರ ಬಗ್ಗೆ ಆತುರ ಬೇಡ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ಮಾತು ಬೇಡ ಎಂದರು.
ಮರ್ಯಾದೆ ಇರುವವರು ಹೆದರುತ್ತಾರೆ, ಮರ್ಯಾದೆ ಇಲ್ಲದವರಿಗೆ ಕೋರ್ಟ್ನಲ್ಲಿದ್ದರೆ ಏನು, ಯಾವುದರಲ್ಲಿದ್ದರೆ ಏನು?. ಯಾವುದನ್ನು ಬೇಕಾದರೂ ಕೊಂಡುಕೊಳ್ಳುತ್ತೇವೆ ಎನ್ನುವ ದುರಂಹಕಾರದಲ್ಲಿರುವವರಿಗೆ ಏನು ಹೇಳುವುದು ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ಆದೇಶ ವಾಪಸ್ ಪಡೆದ ಸರ್ಕಾರ.
ಆದೇಶ ಹಿಂಪಡೆದ ಸರ್ಕಾರ: ಡಿಕೆಶಿ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಆರೋಪ ಪ್ರಕರಣವನ್ನು ಹಿಂದಿನ ಬಿಜೆಪಿ ಸರ್ಕಾರ ತನಿಖೆಗೆ ಆದೇಶಿಸಿತ್ತು. ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಡಿಕೆಶಿ 2020ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ 2023ರ ಅಕ್ಟೋಬರ್ನಲ್ಲಿ ವಜಾಗೊಳಿಸಿ, ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿತ್ತು. ಬಳಿಕ ಸಿಬಿಐ ತನಿಖೆ ಮುಂದುವರೆಸಿ, ಬಹುತೇಕ ಮುಕ್ತಾಯದ ಹಂತಕ್ಕೆ ತಂದು ನಿಲ್ಲಿಸಿದೆ. ಇದೀಗ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಆದೇಶ ವಾಪಸ್ ಪಡೆದಿದೆ. ನವೆಂಬರ್ 29ರಂದು ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ ವೇಳೆ ಈ ಮಾಹಿತಿ ಸಲ್ಲಿಸುವ ಸಾಧ್ಯತೆ ಇದೆ.