ಕಸ ಹಾಕುವ ಜಾಗದಲ್ಲಿ ರಂಗೋಲಿ ಹಾಕಿದ ಅಧ್ಯಕ್ಷ, ಉಪಾಧ್ಯಕ್ಷರು
1 min readಸ್ವಚ್ಛತೆಗಾಗಿ ನಗರಸಭೆಯಿಂದ ವಿನೂತನ ಪ್ರಯತ್ನ
ಕಸ ಹಾಕುವ ಜಾಗದಲ್ಲಿ ರಂಗೋಲಿ ಹಾಕಿದ ಅಧ್ಯಕ್ಷ, ಉಪಾಧ್ಯಕ್ಷರು
ಕಸ ಹಾಕುವವರಿಗೆ ಹೂವು ನೀಡಿ ಸ್ವಚ್ಛತೆ ಕಾಪಾಡಲು ಮನವಿ
ಕಳೆದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ನಿರಂತರ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿರುವ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರು ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಇಂದು ಕಸ ಹಾಕುವವರಿಗೆ ಹೂವು ನೀಡುವ ಮೂಲಕ ವಿನೂತನ ಜಾಗೃತಿ ಮೂಡಿಸಿದರು. ಅಲ್ಲದೆ ಕಸ ಹಾಕುವ ಜಾಗದಲ್ಲಿ ರಂಗೋಲಿ ಬಿಡಿಸಿ ಸ್ವಚ್ಛತೆ ಕಾಪಾಡಲು ಕೋರಿದರು.
ಹೌದು, ಜನರೇ ಹಾಗೆ, ಹೇಳಿದ್ದನ್ನು ಅಷ್ಟು ಬೇಗ ಕೇಳುವುದಿಲ್ಲ. ಅಲ್ಲದೆ ಜನರನ್ನು ದಂಡ, ಕಾನೂ ಮೂಲಕ ಎಷ್ಟೇ ಹೆದರಿಸಿದರೂ ಅವರ ಮನಸ್ಥಿತಿ ಬದಲಾಗುವುದೂ ಇಲ್ಲ. ಹಾಗಾಗಿಯೇ ಪ್ರೀತಿಯಿಂದ ಜನರನ್ನು ಗೆಲ್ಲಲು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರು ಮುಂದಾಗಿದ್ದಾರೆ. ಅಲ್ಲದೆ ಇಂದು ಸ್ವಚ್ಛ ಭಾರತ್ ಅಭಿಯಾನದ ಹಿನ್ನೆಲೆಯಲ್ಲಿ ವಿನೂತನವಾಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ನಾಗರಾಜ್ ಅವರು ಇಂದು ಪ್ರಶಾಂತ ನಗರದ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಕಸ ಹಾಕುವ ಬ್ಲಾಕ್ ಸ್ಪಾಟ್‌ಗಳನ್ನು ಗುರ್ತಿಸಿ, ಅಂತಹ ಕಡೆ ಪೌರ ಕಾರ್ಮಿಕರಿಂದ ಕಸ ತೆಗೆಸಿ ಸ್ವಚ್ಛಗೊಳಿಸುವ ಜೊತೆಗೆ ಅದೇ ಜಾಗದಲ್ಲಿ ರಂಗೋಲಿ ಹಾಕುವ ಮೂಲಕ ಮತ್ತೆ ಅಲ್ಲಿ ಕಸ ಹಾಕದಂತೆ ಮನವಿ ಮಾಡುವ ಕೆಲಸವನ್ನು ಮಾಡಿದರು. ಅಲ್ಲದೆ ಬ್ಲಾಕ್ ಸ್ಪಾಟ್‌ಗಳಿರುವ ಸುತ್ತಮುತ್ತಲ ನಿವಾಸಿಗಳಿಗೆ ಹೂವು ನೀಡಿ, ಅಲ್ಲಿ ಕಸ ಹಾಕಬೇಡಿ, ಪ್ರತಿನಿತ್ಯ ಕಸದ ವಾಹನ ನಿಮ್ಮ ಮನೆ ಮುಂದೆಯೇ ಬರಲಿದ್ದು, ಆ ವಾಹನಕ್ಕೆ ಕಸ ನೀಡುವ ಮೂಲಕ ನಗರದ ಸೌಂದರ್ಯ ಹೆಚ್ಚಿಸುವಂತೆ ಬೇಡಿಕೊಂಡರು.
ಈ ವೇಳೆ ಕಸ ಹಾಕಲು ಬ್ಲಾಕ್ ಸ್ಪಾಟ್ ಪ್ರದೇಶಕ್ಕೆ ವಾಹನದಲ್ಲಿ ಬಂದ ನಾಗರಿಕರಿಗೂ ಹೂವು ನೀಡಿದ ಅಧ್ಯಕ್ಷ, ಉಪಾಧ್ಯಕ್ಷರು ಈ ಜಾಗ ಕಸ ಹಾಕಲು ಇರುವುದಲ್ಲ, ಬದಲಿಗೆ ಅಲ್ಲಿ ರಂಗೋಲಿ ಹಾಕಲಾಗಿದೆ. ಹಾಗಾಗಿ ನಿಮ್ಮ ಮನೆ ಮುಂದೆ ಬರುವ ವಾಹನಗಳಿಗೆ ಕಸ ನೀಡುವ ಮೂಲಕ ಸ್ವಚ್ಛತೆ ಕಾಪಾಡುವಂತೆ ಕೋರಿದರು. ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷ ಗಜೆಂದ್ರ, ನಗರದಲ್ಲಿ ಎಷ್ಟೇ ಅರಿವು ಮೂಡಿಸಿದರೂ ಜನರು ಮಾತ್ರ ತಮ್ಮ ಚಾಳಿ ಬಿಡುತ್ತಿಲ್ಲ. ಹಾಗಾಗಿ ಜನರಿಗೆ ಹೂವು ನೀಡುವ ಮೂಲಕ ಮನವಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು.
ಅಲ್ಲದೆ ಈ ಅಭಿಯಾನ ನಿರಂತರವಾಗಿ ಮುಂದುವರಿಯಲಿದ್ದು, ನಗರದ ೩೧ ವಾರ್ಡುಗಳಲ್ಲಿಯೂ ಅಭಿಯಾನ ನಡೆಯಲಿದೆ. ಅಲ್ಲದೆ ಹೂವು ನೀಡಿ ಮನವಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಬ್ಲಾಕ್ ಸ್ಪಾಟ್‌ಗಳಿರುವ ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಕಸ ಹಾಕುವವರನ್ನು ಗುರ್ತಿಸಿ, ಅಂತಹವರಿಗೆ ದಂಡ ವಿಧಿಸುವ ಮೂಲಕ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದರು.
ನಗರಸಭೆ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ನಗರದಲ್ಲಿ ಅಸ್ವಚ್ಛತೆ ತಾಂಡವವಾಡುವುದಕ್ಕೆ ಈ ಬ್ಲಾಕ್ ಸ್ಪಾಟ್‌ಗಳು ಮುಖ್ಯ ಕಾರಣವಾಗಿದೆ. ನಗರಸಭೆ ಎಷ್ಟೇ ಜಾಗೃತಿ ಮೂಡಿಸಿದರೂ ಜನ ಇದನ್ನು ಮುಂದುವರಿಸುತ್ತಿದ್ದಾರೆ. ಹಾಗಾಗಿ ಕಸ ಹಾಕುವವರಿಗೆ ಹೂವು ನೀಡಿ ಮನವಿ ಮಾಡಲಾಗುತ್ತಿದೆ. ಜೊತೆಗೆ ಕಸ ಹಾಕಿದ ಜಾಗದಲ್ಲಿ ರಂಗೋಲಿ ಹಾಕಿ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಮುಂದೆಯಾದರೂ ಜನ ಕಸದ ವಾಹನಗಳಿಗೆ ಕಸ ನೀಡಿ, ನಗರದ ಸೌಂದರ್ಯವನ್ನು ಕಾಪಾಡಬೇಕೆಂದು ಕೋರಿದರು.