ಬೆಂಗಳೂರಲ್ಲಿ ಚೊಚ್ಚಲ ಕಂಬಳಕ್ಕೆ ಪೂರ್ಣಗೊಂಡ ಸಿದ್ಧತೆ: 200ಕ್ಕೂ ಹೆಚ್ಚು ಕೋಣಗಳು ಕಣಕ್ಕೆ
1 min read
ಬೆಂಗಳೂರಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜಿಸಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸುವ ಸಾಧ್ಯತೆ ಇದೆ.
ಬೆಂಗಳೂರು: ರಾಜಧಾನಿಯಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯಲಿರುವ ಕಂಬಳಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25, 26ರಂದು ನಡೆಯಲಿರುವ ಕೂಟದಲ್ಲಿ ರಾಜಕೀಯ ಗಣ್ಯರು, ಸಿನಿಮಾ ತಾರೆಯರು, ಹೆಸರಾಂತ ಕಲಾವಿದರು ಸೇರಿದಂತೆ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ.
ತುಳುಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಪ್ಯಾಲೇಸ್ ಗ್ರೌಂಡ್ನಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜಿಸಿದೆ. ಕೋಣಗಳ ಸ್ಪರ್ಧೆಗೆ ಈಗಾಗಲೇ ನೀರಿನ ಟ್ರ್ಯಾಕ್(ಕರೆ) ನಿರ್ಮಿಸಲಾಗಿದ್ದು, ತ್ರಿವರ್ಣಧ್ವಜದ ಬಣ್ಣಗಳಿಂದ ಅಲಂಕರಿಸಲಾಗಿದೆ. ಕಂಬಳದ ಟ್ರ್ಯಾಕ್ 157 ಮೀಟರ್ ಉದ್ದ ಹಾಗೂ 8 ಮೀಟರ್ ಅಗಲವಿದೆ. ಒಟ್ಟು 200ಕ್ಕೂ ಹೆಚ್ಚು ಕೋಣಗಳು ಕಂಬಳಕ್ಕೆ ಇಳಿಯಲಿವೆ. ಕೋಣಗಳಿಗೆ ಸಕಲೇಶಪುರ, ಹಾಸನ, ನೆಲಮಂಗಲ ಮೂರು ಕಡೆ ಕೋಣಗಳ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿದ್ದು, ಇಂದು ಕೋಣಗಳು ರಾಜಧಾನಿಗೆ ಬಂದಿಳಿಯಲಿವೆ.