ಪ್ರತಿಮಾ ಕೊಲೆ ಪ್ರಕರಣ: ಶಾಸಕ ಮುನಿರತ್ನ ವಿಚಾರಣೆ ಮಾಡುವಂತೆ ಒತ್ತಾಯ
1 min readಶನಿವಾರ ರಾತ್ರಿ ಬೆಂಗಳೂರಿನ ನಿವಾಸದಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ರಿಯಲ್ ಎಸ್ಟೇಟ್ ಮಾಫಿಯಾ, ರಾಜಕಾಲುವೆ ಒತ್ತುವರಿ ವಿಚಾರಗಳು ಮುನ್ನಲೆಗೆ ಬರುತ್ತಿವೆ, ಈ ಬೆನ್ನಲ್ಲೇ ಶಾಸಕ ಮುನಿರತ್ನ ಹೆಸರು ಕೂಡ ಕೇಳಿ ಬಂದಿದೆ.
ಪ್ರತಿಮಾ ಕೊಲೆ ಸಂಬಂಧ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ವಿಚಾರಣೆ ಮಾಡಬೇಕು ಎಂದು ಕೆಪಿಸಿಸಿ ಕಾನೂನು ಘಟಕದ ಮುಖಂಡ ಸೂರ್ಯ ಮುಕುಂದರಾಜ್ ಆಗ್ರಹಿಸಿದ್ದಾರೆ.
ಹುಣಸಮಾರನಹಳ್ಳಿಯಲ್ಲಿ ಪರವಾನಗಿ ಪಡೆಯದೆ ಬಂಡೆಗಳನ್ನು ಸ್ಫೋಟಿಸಲಾಗಿತ್ತು, ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ್ದ ಪ್ರತಿಮಾ, ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ನೀಡಿದ್ದರು. ವಿಶೇಷ ಎಂದರೆ ಈ ಪ್ರಕರಣದಲ್ಲಿ ಶಾಸಕ ಮುನಿರತ್ನ 2ನೇ ಆರೋಪಿಯಾಗಿದ್ದಾರೆ ಎಂದು ಮುಕುಂದರಾಜ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು, ಸರ್ಕಾರಕ್ಕೆ ಬರಬೇಕಿದ್ದ ರಾಜಸ್ವಧನದಲ್ಲೂ ನಷ್ಟ ಉಂಟು ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು, ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಬಗ್ಗೆ ಹಲವು ಅನುಮಾನಗಳಿದ್ದು, ಎಲ್ಲಾ ಆಯಾಮದಲ್ಲೂ ತನಿಖೆಯಾಗಬೇಕು, ಬಿಜೆಪಿ ಶಾಸಕ ಮುನಿರತ್ನಗೆ ನೋಟಿಸ್ ನೀಡಿ ತನಿಖೆ ನಡೆಸಿ ಎಂದು ಸೂರ್ಯ ಮುಕುಂದರಾಜ್ ಒತ್ತಾಯಿಸಿದ್ದಾರೆ.
ಸೂರ್ಯ ಮುಕುಂದರಾಜ್ ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸೂರ್ಯ ಮುಕುಂದರಾಜ್, ದಾಖಲೆಗಳನ್ನು ಕೂಡ ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರತಿಮಾ ನೀಡಿದ ವರದಿಯನ್ನು ನೀಡಬಹುದಾಗಿದ್ದು, ಶಾಸಕ ಮುನಿರತ್ನ ಹೆಸರು ಕೂಡ ಇದೆ.
“ಕೊಲೆಯಾಗಿರುವ ಹಿರಿಯ ಭೂವಿಜ್ಞಾನಿ ಪ್ರತಿಮಾ ಅವರು ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಶಾಸಕ ಸಿಡಿ ಕಂಪನಿಗಳ ಮಾಲೀಕ ಮುನಿರತ್ನ ವಿರುದ್ಧ ಅಕ್ರಮ ಸ್ಪೋಟಕ ಬಳಕೆ ಮಾಡಿ ಕಲ್ಲು ಶಿಲೆಗಳನ್ನು ಪುಡಿ ಮಾಡಿದ್ದ ಸಂಬಂಧ ಹಾಗೂ ಸರ್ಕಾರಕ್ಕೆ 25 ಲಕ್ಷ ರಾಯಧನ ನಷ್ಟ ಮಾಡಿದ್ದ ಕಾರಣಕ್ಕೆ ಹುಣಸಮಾರನಹಳ್ಳಿ ಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಬಹುಶಃ ಇವರ ಸಹೋದರನ ಹಳೆ ನಂಟು ಈ ಕೊಲೆ ಪ್ರಕರಣದಲ್ಲಿ ಏನಾದರೂ ಹಸ್ತಕ್ಷೇಪ ಮಾಡಿರಬಹುದು ಪೊಲೀಸರು ತನಿಖೆ ನಡೆಸಬಹುದು” ಎಂದು ಭಾವಿಸುತ್ತೇನೆ ಎಂದು ದಾಖಲೆಗಳ ಜೊತೆ ಮಾಹಿತಿ ನೀಡಿದ್ದಾರೆ.