ವಿದ್ಯಾರ್ಥಿಗಳಿಗೆ ಊಟ ಕೊಡುವ ವಿಚಾರದಲ್ಲಿ ರಾಜಕೀಯ ನಾ..?
ಅನುಮತಿ ಇಲ್ಲ ಅಂತ ಪ್ರಾಂಶುಪಾಲರಿ0ದ ಊಟ ನೀಡಲು ನಿರಾಕರಣೆ.
ಪರೋಕ್ಷವಾಗಿ ಜನಪ್ರತಿನಿಧಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಸಂದೀಪ್ ರೆಡ್ಡಿ.
ವಿದ್ಯಾರ್ಥಿಗಳಿಗೆ ಊಟ ನೀಡಲೂ ಅನುಮತಿ ನಿರಾಕರಿಸಿದ ವಿಚಿತ್ರ ಘಟನೆಯಿದು. ಹಸಿದ ಹೊಟ್ಟೆಗೆ ಅನ್ನ ನೀಡುವುದು ಯಾವ ಅಪರಾಧ ಎಂಬ ಪ್ರಶ್ನೆಗೆ ಉತ್ತರ ಸಿಗದ ವಿಪರ್ಯಾಸವೂ ಹೌದು. ಸರ್ಕಾರಿ ಶಾಲಾ ಕಾಲೇಜು ಎಂದರೆ ಬಡವರೇ ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆ. ಅಂತಹ ಬಡವರಿಗೆ ಅನ್ನ ನೀಡದಂತೆ ತಡೆದ ಈ ವಿಚಿತ್ರ ಘಟನೆ ಏನು ಅನ್ನೋದನ್ನ ನೋಡೋಣ ಬನ್ನಿ.
ಚಿಕ್ಕಬಳ್ಳಾಪುರ ನಗರದ ಹೊರವಲಯದ ಶಿಡ್ಲಘಟ್ಟ ಮಾರ್ಗದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಮಧ್ಯಾಹ್ನದ ಸಮಯದಲ್ಲಿ ಉಚಿತವಾಗಿ ಊಟ ಕೊಡಲು ಸಮಾಜಸೇವಕ ಹಾಗೂ ಬಿಜೆಪಿ ಪಕ್ಷದ ಮುಖಂಡ ಭಗತ್ ಸಿಂಗ್ ಚಾರಿಟಿಬಲ್ ಟ್ರಸ್ಟ್ ನ ಅಧ್ಯಕ್ಷ ಸಂದೀಪ್ ರೆಡ್ಡಿ ಮುಂದಾಗಿದ್ದಾರೆ. ಆದ್ರೆ ಇದಕ್ಕೆ ಇಂದು ಪ್ರಾಂಶುಪಾಲರು ಇಲಾಖೆಯಿಂದ ಅನುಮತಿ ಇಲ್ಲದೆ ವಿದ್ಯಾರ್ಥಿಗಳಿಗೆ ಊಟ ಕೊಡಬಾರದು ಇಲಾಖೆಯಿಂದ ಅನುಮತಿ ಪಡೆದು ಕೊಡಬೇಕಾಗುತ್ತದೆ ಅಂತ ಊಟ ವಿತರಣೆಗೆ ನಿರಾಕರಿಸಿದ್ದಾರೆ. ಇದ್ರಿಂದ ಸಂದೀಪ್ ರೆಡ್ಡಿ ಕಾಲೇಜಿನ ಮುಂಭಾಗದ ರಸ್ತೆಯಲ್ಲೇ ವಿದ್ಯಾರ್ಥಿನಿಯರಿಗೆ ಉಚಿತ ಊಟ ವಿತರಣೆ ಮಾಡಿದ್ದು ಕೆಲ ವಿದ್ಯಾರ್ಥಿಗಳು ಊಟ ಸೇವಿಸಿದ್ದಾರೆ….ಈ ಬಗ್ಗೆ ಮಾತನಾಡಿರುವ ಸಂದೀಪ್ ರೆಡ್ಡಿ ಜನಪ್ರತಿನಿಧಿಗಳ ವಿರುದ್ದ ಹೆಸರು ಹೇಳದೆ ಆಕ್ರೋಶ ಹೊರಹಾಕಿದ್ದಾರೆ. ನನಗೆ ಪ್ರಾಂಶುಪಾಲರು, ಕಾಲೇಜಿನ ಉಪನ್ಯಾಸಕರು ಮನವಿ ಮಾಡಿಕೊಂಡ ಕಾರಣದಿಂದಲೇ ಪ್ರತಿ ದಿನ ಕಾಲೇಜು ಸಮಯದಲ್ಲಿ ಮಧ್ಯಾಹ್ನದ ವೇಳೆ ಉಚಿತ ಊಟದ ವಿತರಣೆಗೆ ಒಪ್ಪಿಕೊಂಡೆ. ಕಾಲೇಜಿನಲ್ಲೇ ಆಡುಗೆ ಕೋಣೆ ನಿರ್ಮಾಣಕ್ಕೂ ಮುಂದಾಗಿದ್ದೆ. ಆದ್ರೆ ೧೫ ದಿನಗಳಿಂದ ನಡೆಯುತ್ತಿದ್ದ ಕಾಮಗಾರಿ ನಿಲ್ಲಿಸಿದ್ರು. ನಂತರ ಈಗ ಊಟ ಕೊಡೋಣ ಅಂದ್ರೆ ಅನುಮತಿ ಪಡೆಯಬೇಕು ಅಂತಾರೆ, ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಅಂತ ಪರೋಕ್ಷವಾಗಿ ಕ್ಷೇತ್ರದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.